ಸೋಮವಾರ, ನವೆಂಬರ್ 25, 2013

NH48 ಟೋನಿ ಬರ್ತಿದಾನೆ... ಮುಚ್ಕೊಂಡ್ ಸೈಡ್ ಗೆ ಹೋಗಿ...

ಟೋನಿ...ಅಪ್ಪಾ ಟೋನಿ, ಅಮ್ಮ ಟೋನಿ..
ಕೇಳ್ತಾ ಇದ್ರೆ ಇದೇನಿದು? ಅಪ್ಪ ಅಮ್ಮ ಟೋನಿ..ಅವರ ಫ್ಯಾಮಿಲೀ ಕಥೆ ನಮಗೇಕೆ ಅನ್ಕೊಂಡ್ರಾ?
ಇರ್ರಿರಿ...ಒಂದ್ ನಿಮಿಷ.. ಏನಕ್ಕೆ ಅವಸರ?
ನಮ್ಮ ಜನರೇ ಇಷ್ಟು..ಎಲ್ಲೋದ್ರೂ ಅವಸರಾನೇ.ಎಲ್ಲಿ ಇರಬೇಕೋ ಅಲ್ಲಿ ಇರಲ್ಲ :P.
ಅದು ಮನೆಯ ಮಂಚದಿಂದ ಶುರುವಾಗಿದ್ದು, ಕೆಂಪು ಬಸ್ ನ ಸೀಟ್ ಸಿಗೋವರ್ಗೂ.....
ಬಸ್ ನ ಕಂಡಕ್ಟರ್ ಟಿಕೆಟ್ ಹಿಂದೆ ಮರೆತು ಹೋಗಲಿ ಎಂದು ಚಿಕ್ಕದಾಗಿ ಬರೆದು ಕೊಟ್ಟ ಚಿಲ್ಲರೆ ಹಣದ ಹೆಸರಿನ ಮೇಲೆ ಅವನು ಒಂದು ಕೆಟ್ಟ ಲುಕ್ ಕೊಟ್ಟು scratch ಮಾಡೊವರೆಗೂ...ಹೀಗೆ ಎಲ್ಲೂ ಅವಸರ ಅನ್ನೋ ಪದ ಬಿಟ್ಟು ಹೋಗಲ್ಲ..

ಹಾಂ..!! ಇದು ಬಸ್ ಕಥೆ :P. ಅಂತಿಂತ ಬಸ್ ಅಲ್ಲ ರೀ... ಕರ್ನಾಟಕ ರಸ್ತೆ ಸಾರಿಗೆಯ ಕೆಂಪು ಬಣ್ಣದ ಬಸ್.
ಈ ಬಸ್‌ಗಳಲ್ಲಿ ಡ್ರೈವರ್ ಇರ್ತಾರಲ್ಲಾ. ಅವರ ಲೈಫ್ ಫುಲ್ ಥ್ರಿಲಿಂಗ್ ಅನ್ಸಲ್ವಾ ನಿಮಗೆ?

ಒಂದು ಯೋಚನೆ ಮಾಡಿ:
ಈ ಡರ್ಟ್-ಬೈಕ್ ಅಂತ ಎಲ್ಲ ಇರತ್ತೆ. ಅಷ್ಟೋ ಇಷ್ಟೋ ಹಣ ಕೊಟ್ಟು ಆ ಟ್ರ್ಯಾಕ್ ಅಲ್ಲಿ ಆ offroad ಗಾಡಿ ನಾ ನೀರಲ್ಲಿ ದೋಣಿ ಓಡಿಸಿದ ಹಾಗೆ ಓಡಿಸ್ತೀವಿ.
ಅದೇ ಏನಾದ್ರೂ ನಮ್ಮ ಪಶ್ಚಿಮ ಘಟ್ಟದ ರಸ್ತೆಗಳಲ್ಲಿ ಓಡಾಡೋ ಬಸ್ ಡ್ರೈವರ್ ಆಗಿದ್ರೆ???

ನಿಮಗೆ offroad ಡ್ರೈವಿಂಗ್ craze ಇದ್ದರೆ ಒಂದು ಕನಸು ಕಾಣಿ:
 ನೀವು ಸಖಲೇಶಪುರ(ಇದು ಎಲ್ಲಿದೆ ಅಂತ ಗೊತ್ತಿಲ್ಲ ಅನ್ನೋದಾದ್ರೆ ಮೇಲ್ಗಡೆ X ಮಾರ್ಕ್ ಕಾಣಿಸ್ತಿದೆ ಅಲ್ವಾ?...ಅದನ್ನು ಕ್ಲಿಕ್ ಮಾಡಿ, ಒಂದು ಲೋಟದಲ್ಲಿ ನೀರು ತುಂಬಿಸಿ ನಿಮ್ಮ ಮೂಗು & ಬಾಯಿ ಮುಳುಗಿಸಿ...) , ಗುಂಡ್ಯ ದಿಂದ ನಲಿದಾಡಿ ಹೊರಟು ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ NH48 ಯಾವತ್ತಾದ್ರೂ ಹೋಗಿದೀರಾ? ಅಲ್ಲಿ ರಸ್ತೆಯೊಳಗಡೆ ಗುಂಡಿಯೋ? ಇಲ್ಲ ಗುಂಡಿಯ ಒಳಗಡೆ ರಸ್ತೆಯೋ?? ಅಂತ ನಿಮಗೆ ನೀವು ಒಂದು ಸಾರಿ ಕೇಳಿಕೊಳ್ಳಬೇಕಾದ ಪರಿಸ್ತಿತಿ ಬಂದೇ ಬರುತ್ತೆ.
ವಿಪರ್ಯಾಸವೆಂದರೆ ಆ ರೋಡ್ ಗೆ ಪ್ರತಿ ವರ್ಷ ಟಾರ್ ಹಾಕ್ತಾರಂತೆ. ಪಶ್ಚಿಮ ಘಟ್ಟದ ಮಳೆಯ ಆರ್ಭಟಕ್ಕೋ ಅಥವಾ ಆ ಕಾಂಟ್ರ್ಯಾಕ್ಟರ್ ನ ಕೈಲಾಸದಂತ ಕಾಯಕಕ್ಕೋ ...ಆ ಟಾರ್ ನ ಆಯಸ್ಸು ಬರೀ ಅರ್ಧ-ಮುಕ್ಕಾಲು ಮಳೆಗಾಲ ಅಷ್ಟೇ.
ಈ ಹೈವೇ ಅಥೊರಿಟಿ ಯವರೇನೋ ಜಪಾನೀಸ್ ಟೆಕ್ನಾಲಜೀ ಯೂಸ್ ಮಾಡಿ ಶಿರಾಡಿ ಘಾಟ್ ಗೆ ಟನೆಲ್ ಕೊರೆದು 3 ಘಂಟೆಯ ಫ್ರೀ ಬಾಡೀ ಮಸಾಜ್ ಜರ್ನೀ ನಾ 30 ನಿಮಿಷಕ್ಕೆ ಇಳಿಸೋ ಬಗ್ಗೆ ಏನೋ ಮಾತಾಡ್ತಿದಾರೆ. ಬೇಡ ಅಲ್ವಾ???
ಆ ಶಿರಾಡಿ ಘಾಟ್ ನಲ್ಲಿ ಕೆಂಪು ಬಸ್(ಟೋನಿ) ಪ್ರಯಾಣ ವನ್ನು ನಮ್ಮ ಮುಂದಿನ ಪೀಳಿಗೆಯವರೂ ಎಂಜಾಯ್ ಮಾಡ್ಬೇಕು.
Image
ಕನಸು ಕಂಟಿನ್ಯೂ ಮಾಡಿ:
ನೀವು KSRTC ಕೆಂಪು ಬಸ್ (KA 18 F 583) ಡ್ರೈವರ್ ಆಗಿದೀರಾ. ಡ್ರೈವರ್ ಸೀಟ್ ನಿಮ್ದು. ಬೆಂಗಳೂರು-ಧರ್ಮಸ್ಥಳ ಬಸ್ ಅದು. ಸಖಲೇಶಪುರ ಬಸ್ ಸ್ಟಾಪ್ ಅಲ್ಲಿ ರಾತ್ರಿ 2:30. ಕಂಡಕ್ಟರ್ "ಆ ರೈಯ್ಯಾ....ಪೋಯಿ ಪೋಯಿ..." ಅಂದಾಗ ಶುರು ನಿಮ್ಮ ಆಟ..
ನಿಮ್ಮ ಹಿಂದಿನ ಸೀಟ್ ಅಲ್ಲಿ ಇರುವ 36-37 ರ ಯಜಮಾನ ಪಕ್ಕದಲ್ಲಿ ಮಲಗಿರುವ ಹೆಂಡತಿಯನ್ನು ಮರೆತು, ಅರ್ಧ ಕುಳಿತು ಅರ್ಧ ನಿಂತಿರುತ್ತಾನೆ. ಜೀವದ ಭಯ ಅವನ ಕಣ್ಣಲ್ಲಿ ಇಣುಕುತ್ತಿರುತ್ತದೆ. ನಿಮ್ಮ ತುಟಿಯಂಚಲಿ ನಗು. ಎಷ್ಟೋ ಜನರ ಪ್ರಾಣ ನಿಮ್ಮ ಕೈ-ಕಾಲಲ್ಲಿ ಕಣ್ಣಲ್ಲಿ,ಆ ಕಾನ್ಸೆಂಟ್ರೇಶನ್ ಅಲ್ಲಿ ಇರುತ್ತೆ.
 ಎಲ್ಲೋ ಚಾರಣಕ್ಕೆ ಬಂದಿರುವ ಬೆಂಗಳೂರಿನ ಹುಡುಗರು.. ಕೊನೆಯ ಸೀಟ್ ಅಲ್ಲಿ ಎದ್ದು ನಿಂತು...ಡೋರ್ ಅಲ್ಲಿ ನಿಂದು ನಿಮ್ಮ ವಾಹನ ಚಾಲನಾ ಕೌಶಲ್ಯ ವನ್ನು ಹೊಗಳುತ್ತಾ ಎಂಜಾಯ್ ಮಾಡ್ತಾ ಇರ್ತಾರೆ..ಬಸ್ ಡ್ರೈವ್ ಮಾಡೋ ಕನಸು ಹುಟ್ಟಿ ಬಲೆ ಹೆಣೆದಿರುತ್ತದೆ ಅವರ ಮನಸಲ್ಲಿ. ನರಸಿಂಹ(ನನ್ನ friend) ತರ ಯಾರೋ ಬಂದು "ಸರ್, ನೀವು ನಿಜವಾಗಲೂ ಬಸ್ ಡ್ರೈವರ್ ಆ??" ಅಂತ ಪ್ರಶ್ನೆ ಬೇರೆ ಕೇಳ್ತಾರೆ. ಬೇರೆ ವಾಹನಗಳು "ಹೋಗು ರಾಜಾ.." ಅಂತ ದಾರಿ ಬಿಟ್ಟು ಕೊಡುತ್ತವೆ ಕೆಂಪು ಬಸ್ಸಿಗೆ...ಆ ರಸ್ತೆಯಲ್ಲಿರುವ ತಿರುವು, ಹೊಂಡ,ಹಳ್ಳ :P ಏನನ್ನು ಲೆಕ್ಕಿಸದೆ ವೀಡಿಯೋ ಗೇಮ್ ರೇಸ್ ತರ ಹಾಂಗೆ ಹೊಡ್ಕೊಂಡ್ ಹೋಯ್ತಾ ಇರೋದೇ.. ಅವ್ನ್***.  ಇದಕ್ಕಿನಾ offroad ಡ್ರೈವ್ ಬೇಕಾ?
 Image
ಸಾಕು...ಸಾಕು...ಗುಂಡ್ಯ ಚೆಕ್ ಪೋಸ್ಟ್ ಬಂತು. ಇಳೀರಿ. ಕನಸು ಕಂಡಿದ್ದು ಸಾಕು.
 
ಹೀಗೆ ಎರಡು-ಮೂರು ವಾರದ ಹಿಂದೆ ನಾನು ಸಿಂಹ & ಬಾಬಾ ಕಾರ್ ಎತ್ಕೊಂಡು ದೀಪಾವಳಿ ಪಶ್ಚಿಮ ಘಟ್ಟದಲ್ಲಿ ಆಚರಣೆ ಮಾಡೋಣ ಅಂತ ಹೋಗಿದ್ವಿ. ಶಿರಾಡಿ ಘಾಟ್ ನಲ್ಲಿ ಬೇಜಾನ್ ksrtc (ಟೋನಿ)ಬಸ್ ಗಳು . ಅವರದೇ ರೇಸ್ ಗಳು ನಡೆಯುತ್ತಿರುತ್ತೆ. ಆ ರೇಸ್ ಅಲ್ಲಿ ಬೇರೆ ವಾಹನಗಳನ್ನ ಸೇರಿಸುವುದು ಸಮಂಜಸವಲ್ಲ. ಎಲ್ಲವೂ ಟೋನಿ ಮುಂದೆ ತ್ರಣ ಸಮಾನ.
ಕಾರ್ ಸ್ಟೆರೀಯೋ ಅಲ್ಲಿ ಕಿತ್ತೋಗಿರೋ ಟೋನಿ ಕನ್ನಡ ಮೂವೀಯ  "ಟೋನಿ ಬಂದನು ಬಿಡಿ...ದಾರಿ ಬಿಡಿ...." ಅನ್ನೋ ಸಾಂಗ್ ಪ್ಲೇ ಆಗ್ತಿತ್ತು. ಅದೇ ಟೈಮ್ ಗೆ ಆ ಕರ್ವ್ ಅಲ್ಲಿ ಒಂದು ಕೆಂಪು ಬಸ್ ಜೂಫ್.... ಅಂತ ಓವರ್ ಟೇಕ್ ಮಾಡ್ಕೊಂಡ್ ಹೋಯ್ತು ನೋಡಿ...ಯಪ್ಪಾ...!!!
"ಡ್ರಿಫ್ಟ್ ಮಾಡದಾ ಆಲ್‌ಮೋಸ್ಟ್ ಅವ್ನ್*** " ಅಂತ ಬಾಬಾ ಗಾಬರಿಯಿಂದ ಹಿಂದಿನ ಸೀಟ್ ನಿಂದ ಮೌನ ಮುರಿದ. 

ಆಯ್ತಲ್ಲಾ ನಾಮಕರಣ???!! ಆ ಹಾಡಿಗೆ ಆ ಬಸ್ಸಿಗೆ ಲಿಂಕ್ ಮಾಡಿ ಕೆಂಪು ಬಸ್ ನಾ TONY ಅಂತ ನಾಮಕರಣ ಮಾಡಿದ್ವಿ.
ಹೆಸರು ಇಡೋದು ನಮಗೆ ಹೇಳಿ ಕೊಡ್ಬೇಕಾ??? :P

ಮಾಮೂಲಿ ಕೆಂಪು ಬಸ್ : ಟೋನಿ 
ರಾಜ ಹಂಸ: ಅಮ್ಮ ಟೋನಿ
ಐರಾವತ: ಅಪ್ಪ ಟೋನಿ
 
ಆ ರೋಡ್ ಅಲ್ಲಿ ಬಸ್ ಹೋಗೋದ್ ನೋಡೋದೇ ಮಜಾ....ಮಳೆಗಾಲದಲ್ಲಿ ಹೋಗೋದು ಇನ್ನೂ ಮಜಾ...
ಬೆಂಗಳೂರು-ಗುಂಡ್ಯ ಟಿಕೆಟ್ ತಗೊಂಡು ಟೋನಿ ಯ ಕೊನೆಯ ಕಿಟಕಿಯ ಸೀಟ್ ಹಿಡ್ಕೊಂಡು ಕೂತ್ಕೊಳೋದು ನೆನಸಿಕೊಂಡ್ರೆ...ಮೈಯೆಲ್ಲಾ ಜುಂ ಅನ್ನತ್ತೆ . ಆ ಕಿಕ್ ಏ ಬೇರೆ.
ನಿಮಗೆ ಇನ್ನೂ ಎಕ್ಸ್‌ಪೀರಿಯೆನ್ಸ್ ಆಗಿಲ್ಲ ಅಂದ್ರೆ ಬೇಗ ಹೋಗಿ..ಆ ಪಶ್ಚಿಮ ಘಟ್ಟದ ಸೊಬಗು, ಹರಿವ ನೀರು.. ಸುರಂಗ ದಾಟುವ ರೈಲುದಾರಿ, ಆ ಮಳೆ ಇರುವ ದಾರಿಯಲಿ ಟೋನಿಯ ಕೊನೆಯ ಕಿಟಕಿಯ ಸೀಟ್ ಅನ್ನು ಜಗಳ ಮಾಡಿ ಆದರೂ ಗಿಟ್ಟಿಸಿಕೊಳ್ಳಿ...

ಶಿರಾಡಿ ಘಟ್ಟ ನಿಮ್ಮನ್ನು ಕರೆಯುತ್ತಿದೆ.

ಖಾಲಿ ಕ್ವಾರ್ಟರ್ ಬಾಟಲಿ ಹಾಂಗೆ ಲೈಫು..!!!!!!

ಅವನು ನೋಡಲು ಕೆಟ್ಟವನಾಗಿರಬಹುದು, ಮನಸ್ಸಿಂದ ವಜ್ರ. ಅವನ ಆದರ್ಶ ವಿಚಾರಗಳಲ್ಲಿ ಏನೋ ಒಳ್ಳೆಯತನ ಅನ್ನೋ ಹಸಿವು ಕಾಣಿಸುತ್ತದೆ. ಪ್ರತಿ ಸರಿ ಅವನನ್ನ ಬೇಟಿ ಆದಾಗ ಒಂದೊಂದು ಹೊಸ ಕಥೆ ತೆರೆದುಕೊಳ್ಳುತ್ತದೆ.
ಅವನಿಗೆ ನನ್ನ ಮೇಲೆ ಅಪಾರ ನಂಬಿಕೆ. ಅವನಿಗೆ ಬೇಜಾರಾದಾಗೆಲ್ಲ ನನ್ನ ಕರೆಸಿಕೊಳ್ಳುತ್ತಾನೆ. ನನ್ನ ಹೆಗಲಿಗೆ ಒರಗಿ ತನ್ನ ಕಷ್ಟ, ಮಾಡಿದ ತಪ್ಪುಗಳನ್ನು ಹೇಳುತ್ತಾನೆ. ನನ್ನಿಂದ ಸಮಾಧಾನದ ಒತ್ತಾಸೆ ಬಯಸುತ್ತಾನೆ. ಪ್ರತಿ ಬಾರಿ ಅವನ ಕೊನೆಯ ಶಬ್ದಗಳು...."ಕ್ಷಮಿಸು ಕ್ಷಮಿಸು???" ಅನ್ನುವುದಾಗಿರುತ್ತದೆ. ನನ್ನಲ್ಲಿ ಪ್ರಶ್ನೆಗಳನ್ನು ಬಿಟ್ಟು ಮತ್ತೆ ನಿನಗೆ ಸಿಗಲ್ಲ ಅಂತ ಹೇಳಿ ಹೊರಟು ಹೋಗುತ್ತಾನೆ....ಅವನು ಹೊರಡುವಾಗ ಇಬ್ಬರ ಮುಖದಲ್ಲೂ ನಗುವಿರುತ್ತದೆ.
ಅವನು ಮತ್ತೆ ಸಿಗದಿರಲಿ, ತಪ್ಪು ಮಾಡದಿರಲಿ, ಖುಷಿಯಾಗಿರಲಿ ಅಂತ ಪ್ರತಿ ಬಾರಿ goodbye ಹೇಳುತ್ತದೆ ಮನಸ್ಸು. ಆದರೂ ಎಲ್ಲೋ ಮನದ ಮೂಲೆಯಲ್ಲಿ ತಳಮಳ. ಅವನು ಬಂದೆ ಬರುತ್ತಾನೆ ಅನ್ನೋ ನಂಬಿಕೆ... ಈ ದುಗುಡ, ದ್ವಂದ್ವಗಳಲ್ಲಿ ಅವನ ಕೊನೆಯ ಹೆಜ್ಜೆ ಅಳಸಿ ಮರೆಯಾಗುತ್ತದೆ ಎಂದಿನಂತೆ.
ಅವನು ವಿಚಿತ್ರ. ಕಾಣದ ಕನಸುಗಳಿಲ್ಲ. ಆಡದ ಮಾತುಗಳಿಲ್ಲ. ನಂಬಿಕೆ ಅನ್ನೋ ಪದದ ಒಳಾರ್ಥ ಅವನಾಗಿರಬೇಕು. ಅವನ ಯೋಚನೆಗಳು ಅಚಲ. ಚದುರಂಗದ ಕಾಯಿಗಳಂತೆ ಅವನ ನಡೆ. ಪ್ರತಿ ನಡೆಯಲ್ಲೂ ಹೊಸ ಆವಿಷ್ಕಾರ, ಹೊಸ ವಿಚಾರ , ಹೊಸ ಭರವಸೆಗಳನ್ನ ತುಂಬಿಕೊಂಡು ನಡೆಯುವ ದಾರಿಯಲ್ಲಿ ತಪ್ಪು ಮಾಡುವುದು ವಿರಳ....ಆ ತಪ್ಪುಗಳೇ ನಮ್ಮ ಬೇಟಿಯ ಆಮಂತ್ರಣ.....ಬೇಟಿಗಳ ದೂರ ನಮ್ಮ ವಯಸ್ಸಿನಂತೆ ಬೆಳೆಯತೊಡಗಿತು. ಎಷ್ಟೋ ತಿಂಗಳುಗಳ ಮೇಲೆ ಮೊನ್ನೆ ಅವನ ಕರೆ ಬಂತು.
ಅವನ ಮಾತುಗಳಲ್ಲಿ ಅವನ ಮುಖ ಗುರುತಿಸಿದ ನಾನು...ಕೇಳುವ ಪ್ರಶ್ನೆಗೆ ಅವನು ಮೊದಲೇ ಉತ್ತರಿಸಿದ.
"ಜೀತು, ಒಬ್ಬನೇ ಬಂದು ಬಾರಿನಲ್ಲಿ ಕುಡಿಯಬೇಕು ಅಂದಾಗ ನೀನೇ ಕಣ್ಮುಂದೆ ಬರ್ತೀಯಾ.... ಪೆಗ್ ರೆಡೀ ಇದೆ. ಕುಡಿಯಕ್ಕೆ ಆಗ್ತಿಲ್ಲ....ನಿನಗೆ ಕೊಟ್ಟ ಮಾತಿನಲ್ಲಿ ತೂಕವಿದೆ ಗೆಳೆಯ...ಬರ್ತೀಯಾ????"
ಸರಿ ಬರ್ತಿದಿನಿ ಅಂತ ಹೇಳಿ ಹೊರಟಾಗ ನಾನು ಹೇಳಿದ ಮಾತುಗಳು ನೆನಪಾದವು.
ಗೆಳೆಯರೆಲ್ಲ ಜೊತೆಯಾದಾಗ ಕೂಡಿದ ಅಮಲಿನಲ್ಲಿ ಮಾತಿಗೆ ಹೇಳಿದ ಮಾತುಗಳು ಅವು. "ಜಗತ್ತಿನಲ್ಲಿ ಯಾರೂ ಒಬ್ಬಂಟಿಯಲ್ಲ, ನಿಮಗೆ ಆ ತರ ಅನಿಸಿದಾಗ, everything ಈಸ್ over ಅಂತ ಅನಿಸಿದಾಗ , ಒಬ್ಬನೇ ಕುಳಿತು ಕುಡಿಯಬೇಕು ಅನಿಸಿದಾಗ ಈ VJ ನಾ ನೆನಪು ಮಾಡ್ಕೊಳಿ. ಸ್ಮಶಾನದಲ್ಲಿ ಹೂತಿದ್ರು ಎದ್ದು ಬರ್ತೀನಿ ..." ಅನ್ನೊ ಮಾತನ್ನ ನಮ್ಮ ಗೆಳೆಯ ಸೀರೀಯಸ್ ಆಗಿ ತಗೊಂಡಿದ್ದ. ನಾನು ಹೇಳಿದ ಮಾತುಗಳಲ್ಲಿ ನನ್ನ ಮನದ ಕನ್ನಡಿ ಇತ್ತು. ಅದರಲ್ಲಿ ಇಣುಕಿ ತನ್ನ ಮುಖ ನೋಡಿದವನು ಇವನೊಬ್ಬನೇ ಅನಿಸುತ್ತದೆ.
ಅವನು ಕಲಾವಿದ, ಹುಟ್ಟಿನಿಂದಲ್ಲ. ಪ್ರೀತಿಯ ಆಳ ಹುಡುಕಲು ಹೋಗಿ ಪ್ರೀತಿಸಿ ಕಲಾವಿದನಾದವನು.ಅವನು ನನ್ನಾಕೆಯನ್ನು ಪ್ರೀತಿಸಿದ. ನಾನು ಅವರಿಬ್ಬರ ಪ್ರೀತಿಯನ್ನು ಪ್ರೀತಿಸಿದ್ದೆ :) ಅದು ಇಬ್ಬರಿಗೂ ಗೊತ್ತಿಲ್ಲ ಇಂದಿಗೂ.... ಅವನಾಕೆ ಅವನ ಕಲೆಯನ್ನ ಪ್ರೀತಿಸಿದಳು. ಅವನು ಗೀಚಿದ್ದು ಅಳಿಸದ ಕವಿತೆಗಳಾಗಿದ್ದವು. ಬರೆದ ಚಿತ್ರಗಳು ಅಳಿಸಿದ ಮೇಲೆ ಮೂಡಿದಂತಾಗಿದ್ದವು. ಕೊನೆಯ ಬೇಟಿಯ ವರೆಗೂ ಅವನ ಪ್ರೀತಿ ವಿಚಾರದಲಿ ಯಾವುದೇ ತೊಂದರೆ ಇರಲಿಲ್ಲ. ಈ ಬಾರಿಯೂ ಅದಾಗದಿರಲಿ ಅಂತ ಮನಸ್ಸಿನಲ್ಲಿ ಆಶಿಸಿ ಆ ಬಾರ್ ನಾ ಒಳಗಡೆ ಹೊರಟೆ.
ಹೇಯ್, ಹೇಗಿದಿಯೋ??? ಅಂತ ನನ್ನ ಪ್ರಶ್ನೆಗೆ ಬಿಗಿಯಪ್ಪುಗೆ ಉಡುಗೊರೆ.
ಥ್ಯಾಂಕ್ಸ್ ಕಣೋ ಜೀತು....ತುಂಬಾ ದಿನ ಆದ್ಮೇಲೆ ಸಿಕ್ಕ್ತಿದೀವಿ. ಏನು ತಗೋತಿಯ??? ತುಂಬಾ ಮಾತಾಡೋದ್ ಇದೆ ನಿನ್ನ ಹತ್ತಿರ. ಅಂದ.
ಅದೆಲ್ಲ ಆಮೇಲೆ ಮೊದಲು ವಿಷಯಕ್ಕೆ ಬಾ....ಏನಾಯ್ತು???? ಅಂದೆ
ಎಲ್ಲ ಹೇಳ್ತೀನಿ...ಕೂತ್ಕೊ ಅಂತ ಹೇಳಿ..ಮಾಡಿ ಇಟ್ಟಿದ್ದ ಪೆಗ್ ನಾ ಒಂದೇ ಸಾರಿ ಗಂಟಲಿಗೆ ಇಳಿಸಿದ....
ಅವಳು ನನ್ನ ಬಿಟ್ಟು ಹೊರಟು ಹೋದಳು ಜೀತು...ಅಂತ ಅಳಕ್ಕೆ ಶುರು ಮಾಡಿದ.
ನನ್ನ ಯೋಚನೆಗಳು ನಿಜವಾಗಿತ್ತು.
ಏನಕ್ಕೋ??? ಏನಾಯಿತು?? ಅಂತ ಕೇಳಿದೆ.
ಏನಕ್ಕೋ ಏನೋ ಕಾರಣ ಕೊಡದೆ ಹೊರಟು ಹೋದಳು. ಎಲ್ಲ ಕಡೆ ಹುಡುಕಿದೆ. ಎಲ್ಲೂ ಸಿಕ್ಕಿಲ್ಲ.
ನಾವಿಬ್ಬರೂ ಜೊತೆಯಾಗಿದ್ದರೆ ಇಬ್ಬರು ಖುಷಿಯಾಗಿರಲ್ಲ. ಅಂತ ನನ್ನ ಅವಳ ನಡುವೆ ಇರುವ ವ್ಯತ್ಯಾಸಗಳ ಒಂದು ಪುಸ್ತಕ ಬರೆದು ಓದಲು ಕೊಟ್ಟು ಮರೆಯಾದವಳು, ಇನ್ನೂ ಹಿಂತಿರುಗಿ ನೋಡಿಲ್ಲ...
ಅವಳಿಲ್ಲದೆ ನನಗೆ ಉಸಿರೇ ಇಲ್ಲ...ಹೇಗೆ ಬದುಕಲಿ ನಾನು??? ಅವಳ ಮಾತುಗಳಲ್ಲಿ ಅವಳಿರದೆ ನಾನು ಬದುಕುವ ಕನಸಿದೆ. ಅದು ಅಸಾದ್ಯ ಅನ್ನುವುದು ನನಗೆ ಗೊತ್ತು.
result ಬರದ exam ಬರೆಯೋದರಲ್ಲಿ ಏನು ಅರ್ಥ ಜೀತು???
ಏನು ಮಾಡಲಿ ಅಂತ ಗೊತ್ತಾಗ್ತಿಲ್ಲ....ಬದುಕಿಗೆ ಅರ್ಥ ಇಲ್ಲ ಅಂತ ಅನಿಸುತ್ತದೆ ಒಮ್ಮೊಮ್ಮೆ.
ಆ ಸಮಸ್ಯೆಗೆ ನನ್ನ ಬಳಿ ಉತ್ತರವಿತ್ತು.
ಅವನಿಗೆ ಹೇಳಿದೆ "ಗೆಳೆಯ ನೀನು ಅವಳನ್ನ ಎಷ್ಟು ಪ್ರೀತಿಸುತ್ತೀಯಾ ಅಂತ ನನಗೆ ಗೊತ್ತು.
ಅವಳು ಅದಕ್ಕಿಂತ ಹೆಚ್ಚಾಗಿ ನಿನ್ನ ಇಷ್ಟ ಪಡುತ್ತಾಳೆ. ಅವಳು ಎಲ್ಲಿಗೂ ಹೋಗಲ್ಲ...ನಿನ್ನ ಬಿಟ್ಟು ಅವಳು ಇರಲು ಸಾಧ್ಯವಿಲ್ಲ...
ನಿನ್ನ ಹುಡುಗಿಯಾಗುವ ಮೊದಲು ಅವಳು ನನ್ನ ಸ್ನೇಹಿತೆ. ಅವಳು ಯಾವ ತರ ಅಂತ ನನಗೆ ಚೆನ್ನಾಗಿ ಗೊತ್ತು.
ಎಲ್ಲೋ ಹೋಗಿ ದೂರದಲ್ಲಿ ನಿನ್ನ ನೆನಪಿಸಿಕೊಂಡು ಅಳುತ್ತಿರುತ್ತಾಳೆ, ಇಲ್ಲ ಅಂದ್ರೆ ಯಾವುದಾದರೂ ಆಶ್ರಮಕ್ಕೆ ಹೋಗಿ ಮಕ್ಕಳ ಜೊತೆ ಒಂದಾಗಿ ಮಕ್ಕಳಂತೆ ಆಡುತ್ತಿರುತ್ತಾಳೆ. "
ನನ್ನ ಮಾತನ್ನು  ಕೇಳಿ ಅವನು ನಗುತ್ತಿದ್ದ. "ಗೂಬೆ ನನ್ನ ಮಗಳು ಅವ್ಳು...ಅಂದ".
ನಾನು ತುಂಬಾ ತಪ್ಪು ಮಾಡಿದೀನಿ. ಅವಳಿಗೆ ಅದರ ಸುಳಿವು ಇಲ್ಲ. ಎಲ್ಲ ಬಿಟ್ಟು ಒಳ್ಳೆಯವನಾಗಿರ್ತೀನಿ. ಒಂದು ಸರಿ ಅವಳು ಬಂದರೆ ಸಾಕು ...ಅಂತ ಮತ್ತೆ ಕುಡಿಯಕೆ ಶುರು ಮಾಡಿದ.
ಅವನ ಹುಡುಗಿ ನನ್ನ ಜೊತೆ ಬೆಳೆದ ನನ್ನ ಬಾಲ್ಯ ಸ್ನೇಹಿತೆ. ಒಂತರಾ ಮಜಾ ಇದಾಳೆ. ಮಕ್ಕಳ ತರ ಯೋಚನೆ ಮಾಡ್ತಾಳೆ. ಜಗಳ ಮಾಡ್ತಾಳೆ. ಏನೇನೋ...ಇವನನ್ನ ಬಿಟ್ಟು ಎಲ್ಲಿಗೂ ಹೋಗಲ್ಲ ಅವಳು. ನನಗೆ ಗೊತ್ತು...ಅದು ಅವನಿಗೂ ಗೊತ್ತು...
ಆದರೂ ಈ ಡವ್ ಗಳು.
ಕುಡಿದಿದ್ದು ಸಾಕು ಬಾ.. ಅವಳು ಬರ್ತಾಳೆ ಮನೆಗ್ ಹೋಗಣ ಅಂತ ಹೇಳಿ ಅವನನ್ನು ಮನೆಗೆ ಬಿಟ್ಟು, ನಾನು ಮನೆಗೆ ಬಂದು ಮಲಗಿದೆ.
ಮತ್ತೆ ಅವನನ್ನ ಸಮಾಧಾನ ಮಾಡಲು ಫೋನ್ ಮಾಡಿ 2 ಘಂಟೆ ಮಾತಾಡಿದೆ....
ನಿದ್ದೆ ಬಂತು...
ಬೆಳಿಗ್ಗೆ ಬೆಳಿಗ್ಗೆ unknown ನಂಬರ್ ಇಂದ ಫೋನ್ ಕಾಲ್...
ಎತ್ತಿದ ತಕ್ಷಣ firing "ಲೋ ಗೂಬೆ,ಡಬ್ಬಾ VJ, ನೀನು ಕುಡಿದು ಹಾಳು ಆಗೋದಲ್ಲದೇ ನನ್ನ ಹುಡುಗನ್ನ ಕುಡಿಸಿ ದಾರಿ ತಪ್ಪಿಸ್ತಿದಿಯಾ?...ಇದೆ ಕಣೋ ನಿನಗೆ ಹಬ್ಬ... ಬಾ ಮನೆಗೆ ..." ಅಂತ ಆವಾಜ್ ಗಳು.
ಆ ನನ್ಮಗ ಹೀರೊ ತರ ಅವಳ ಪಕ್ಕ ನಿಂತು ನಗುತ್ತಿರುವುದು ನನಗೆ ಕೇಳಿಸುತಿತ್ತು.
ಆದರೂ ಈ ಹುಡಗಿಯರನ್ನ ಅರ್ಥ ಮಾಡ್ಕೊಳಕ್ಕೆ ಆಗಲ್ಲ.....
"ಎಲ್ಲಿ ಸಾಯಕ್ಕೆ ಹೋಗಿದ್ದೆ???? ಬಂದೆ ಇರು ಅಂತ ಹೇಳಿ ಫೋನ್ ಕಟ್ ಮಾಡ್ದೆ."
ಇವರ ಸಹವಾಸ ಬೇಕಾ ಗುರು???? ಅಂತ ಹೇಳಿ ನನ್ನ ತಲೆ ಚೆಚ್ಚಿಕೊಂಡೆ....
ಹುಡಗೀರು ಅರ್ಥ ಆಗಲ್ಲ ಗುರು....!!! ನೀವು ಒಬ್ಬ ಹುಡುಗೀನ complete ಆಗಿ ಅರ್ಥ ಮಾಡ್ಕೊಂಡಿದೀರಾ ಅಂದ್ರೆ IAS exam ಆರಾಮಾಗಿ clear ಮಾಡಬಹುದು ಅನ್ನೋದು ನಮ್ಮ ಅನಿಸಿಕೆ.... :P ಏನಂತೀರಾ??? ....

ಮಲೆನಾಡು, ಮಳೆ ಮತ್ತು ಅವಳು.....

Image
ಮಲೆನಾಡು ಅನ್ನೋ ಪದ ನಮ್ಮ ಉಸಿರಾಟ ಇದ್ದ ಹಾಗೆ...ಅಪದಮನಿ, ಅಭಿದಮನಿ ಗಳು ಸಂವಹನ
ನಡೆಸುವವರೆಗೂ ಆ ಪದ ನಮ್ಮ ಹಿಮೋಗ್ಲೋಬಿನ್ ಜೊತೆ ಓಡಾಡುತ್ತಲೇ ಇರುತ್ತದೆ.
ಚಂದ್ರ, ತಾರೆ, ಬೆಳದಿಂಗಳು ಹೀಗೆ ಏನೇನೋ ಕವಿಗಳು ಜನ್ಮ ನೀಡಿದ ಶ್ರಂಗಾರ ಸಾಲುಗಳ ಬದುಕಾಗಿರುವ
ಪದಗಳ ಸಾಲಿನಲ್ಲಿ ನಾವು ಜೋಡಿಸುವ ಹೊಸ ಪದಗಳಲ್ಲಿ "ಮಲೆನಾಡು" ಕೂಡ ಒಂದು....
ಯಾವುದೇ ಹುಡುಗಿಯನ್ನು ಕಲ್ಪಿಸಿಕೊಂಡು, ಅವಳ ಸೌಂದರ್ಯ ಹೊಗಳಲು ಬರೆಯುವ ಕವನದ ಶಬ್ದಗಳ
ಹುಡುಕಾಟದಲ್ಲಿರುವಾಗ ನಮ್ಮ ಮನಸ್ಸು ಮೊದಲು ನೆನೆಯುವುದೇ ಅದು..."ಮಲೆನಾಡು".
ಮಲೆನಾಡಿಗೂ ಪ್ರೀತಿಗೂ ಏನೋ ಬಿಡಿಸಲಾರದ ನಂಟು....
"ಆಗುಂಬೆಯ ಪ್ರೇಮ ಸಂಜೆಯ....." ಅಂತ ಅಣ್ಣಾವ್ರ ಹಾಡಿನ ರಾಗಕ್ಕೆ...ಮನಸು ಹೆಜ್ಜೆ ಹಾಕಿದ ಅನುಭವ ಆಗದಿರದು.
ಪ್ರೀತಿಯ ಬಣ್ಣ ಕೇಳಿದ ಹುಡುಗಿಗೆ, ಮಲೆನಾಡಿನ ಹಸಿರನು ತೋರಿಸಿ......ಅದು ನಮ್ಮ
ಮೋಡ, ಮಳೆಯ ಸುರಿಸುತ್ತೆ ಎಂಬ ನಂಬಿಕೆಯಲ್ಲಿ, ಅವಳು ತಂದಿದ್ದ ಛತ್ರಿ ಬಿಡಿಸಿ,
ಮಳೆಯನ್ನು ಕಾಯುತ್ತಿರುವಾಗ ಅಲ್ಲಿದ್ದಿದ್ದು ಬರೀ ನಿರೀಕ್ಷೆ...
ನನಗೆ ಮಳೆಯದು...ಅವಳಿಗೆ ನನ್ನ ಮಾತು.
ಮೌನ....ಮಳೆ ಬರುವವರೆಗೂ...
ನನ್ನ ಪ್ರೀತಿಯ ಮಾತುಗಳನ್ನ ಕೇಳಲು ಆ ಮಳೆಯು ಕರಗಿತ್ತು...ನನ್ನವಳ ನಿದ್ದೆ ಇನ್ನೂ ಮುಗಿದಿರಲಿಲ್ಲ...
ಕೊಡೆ ಹಿಡಿದ ಅವಳ ಕೈಗಳಲ್ಲಿ ಆಗಾಗ ಒರೆಸಿಕೊಳ್ಳುತ್ತಿದ ಕಣ್ಣುಗಳು ರೆಪ್ಪೆಯ ಮಿಡಿತಗಳಿಗೆ ಮನಸೋತಿದ್ದವು...
ಇಬ್ಬನಿಯ ಮಳೆ ಕೊನೆಗೂ ಬಂತು...
ಅದು ಮಂಜಿನ ಶಾಖ....ಅವಳನ್ನ ನೋಡಿದೆ...ನಿನ್ನ ಮಳೆ ಇದೇನಾ???? ಅನ್ನೋ ಪ್ರಶ್ನೆ ಅವಳ ನೋಟದ
ನೂಲಲ್ಲಿ ಹೆಣೆದಿಟ್ಟು, ಕಣ್ಣು ಮುಚ್ಚಿ ಮಂಜಿಗೆ ಮುಖವಿಟ್ಟು ಮಲೆನಾಡಿನ ಸೊಬಗನ್ನು
feel ಮಾಡ್ಕೋತಿರೋ ಅವಳನ್ನ ನೋಡಿದ ನನಗೆ...ನಮ್ಮ ಭಟ್ಟರ ಯಾವುದೋ ಹಾಡು ಗಂಟಲಿನ
ಧ್ವನಿಪೆಟ್ಟಿಗೆಯಲ್ಲಿ ಹುಟ್ಟಿ ಅಲ್ಲೇ ಮರೆಯಾಗಿತ್ತು....
ಸ್ವಲ್ಪ ಜನ ಹುಡುಗೀರು ಮಲಗಿರುವಾಗ ಕ್ಯೂಟ್ ಆಗಿ ಕಾಣಿಸುತ್ತಾರಂತೆ...ಇನ್ನೂ ಕೆಲವರು
ಬೆಳಿಗ್ಗೆ ಎದ್ದಾಗ....ಅದೂ ಮುಖಕ್ಕೆ ನೀರು ತೋರಿಸದೆ...make-up ಇಲ್ಲದೆ....
 
ಮಳೆ ಲೈಟ್ ಆಗಿ break ತಗೊಂತು....
ನಾನು ಅವಳು ಕಣ್ಣು ಬಿಡುವುದನ್ನು ಕಾಯುತ್ತಿದ್ದೆ.
ಮನಸು ಹೇಳುತ್ತಿತ್ತು "ಏ ಹುಡುಗಿ, ನೀನು ಕಣ್ಣು ಮುಚ್ಚಿಕೊಂಡಿದ್ದರೇನೇ ಚೆನ್ನ ಕಣೆ...!!!" ಅಂತ.
ಆದರೂ ಮನದ ಗೂಡಲ್ಲಿ ಬಚ್ಚಿಟ್ಟ ಮಾತನು ಬಿಚ್ಚಿ ಹೇಳುವುದರ ಮುನ್ನ ಆ ಮನಸಿಗೆಲ್ಲಿದೆ ಸಮಾಧಾನ ಹೇಳಿ.
ಕೊನೆಗೂ ಹುಡುಗಿ ತಿರುಗಿದಳು. ಅವಳಿಗೆ ಆಗಲೇ ಪ್ರೀತಿಯಾಗಿತ್ತು ಮಲೆನಾಡಿನ ಮೇಲೆ.
ಮಲೆನಾಡು ಮೌನಿ..ನಾನು ಮಾತು...ಇಬ್ಬರು ಒಟ್ಟಿಗೆ ಇಷ್ಟವಾಗುವ  ಕ್ಷಣದ ಹುಡುಕಾಟದಲ್ಲಿ ಮಾತು ನಾಲಿಗೆಯನ್ನು ಜಾರಿತ್ತು.
 
ಅವಳು ಏನೋ ನೀರಿಕ್ಷೆಯನ್ನು ಕಂಗಳಲಿ ತುಂಬಿಕೊಂಡು ಒಮ್ಮೆ ಮೋಡಗಳನ್ನು ನೋಡಿ, ಮತ್ತೆ ನನ್ನ ನೋಟದ frequency ಗೆ ಟ್ಯೂನ್ ಮಾಡಿದಳು.
ಅವಳು ಮಳೆಯನ್ನ ಮಿಸ್ ಮಾಡ್ಕೋತಿದ್ದಳು. ಅವಳ ಕಣ್ಣನ್ನ ನನ್ನ ಕೈಯಿಂದ ಮುಚ್ಚಿ...
"ಮತ್ತೆ ಮಳೆ ಬರೋವರೆಗೂ, ಕಣ್ಣು ತೆರೆಯದಿರು, ಮೌನಿಯಾಗಿರು" ಅಂದೆ.
ನೀನು ಹೇಳಿದರೆ ನಾನು ಯಾವತ್ತಾದರೂ ಇಲ್ಲ ಅಂತ ಅಂದಿದೀನಾ??? ಅಂತ ಅವಳು ಕಣ್ಣು ಮುಚ್ಚಿ ಮುಖ ಆಡಿಸಿದ ಮುಗ್ದತೆ ಹೇಳಿತ್ತು.
" ಏ ಹುಡುಗಿ, ನೀನು ಅಂದ್ರೆ ನನಗೆ ಇಷ್ಟ ಕಣೆ....ನೀನು ಕೊನೆ ಉಸಿರಿರೋವರೆಗೂ ನನ್ನ ಜೊತೆ ಇರುತ್ತೀಯಾ ಅಲ್ವಾ??
ಕಣ್ಣೀರು ಮಳೆನೀರು ಮಿಕ್ಸ್ ಆದ್ರೆ ಏನಾಯ್ತು ಅಂತ ಯಾರಿಗೂ ಗೊತ್ತಾಗಲ್ಲ..ನೀನು ಇಲ್ಲ ಅಂದ್ರೆ.
ನಿನ್ನ ಉತ್ತರ ಹೌದು ಅನ್ನೋದಾಗಿದ್ರೆ ಮುಂದಿನ ವಾರ ಇರೋ ಹೋಳಿ ಹಬ್ಬಾನಾ ಇವತ್ತೇ ಈ ಮಲೆನಾಡಿನ ಮಳೆ ನೀರಲ್ಲಿ ಆಡಿ ಬಿಡೋಣ...
ನಾನು ಆ ಕಡೆ ತಿರುಗಿ ನನ್ನ ಕಣ್ಣು ಮುಚ್ಚಿ ನಿಂತಿರ್ತೀನಿ. ಮಳೆ ಬಂದ ಮೇಲೆ, ಹೋಳಿ ನಾ ಇಲ್ಲಾ ಬರೀ ಮಳೆನಾ??? ಅಂತ ಕಿವಿಲಿ ಹೇಳಿಬಿಡು..." ಅಂತ ಹೇಳಿ ಕಣ್ಣು ಮುಚ್ಚಿದೆ....
ಮಳೆಹನಿ ಮುಖಕ್ಕೆ ಮುತ್ತುಕೊಟ್ಟಿತ್ತು... ಅವಳು ನನ್ನೆಡೆಗೆ ಬರುತ್ತಿರುವುದನ್ನು ಅವಳ ಗೆಜ್ಜೆಗಳು ಹೇಳುತ್ತಿದ್ದವು.
ಉಸಿರಾಟದ ವೇಗ ಹೆಚ್ಚಾಗಿತ್ತು...

ಯಾರೋ ಬರೆದ ಮೂರು ಬದುಕು

beach-aloneಆ ತೀರದಲ್ಲಿ ಸೂರ್ಯ ಕಣ್ಣು ಮುಚ್ಚುವ ಸಮಯ. ಅಲೆಯ ಅಬ್ಬರ ಚಂದ್ರನ ಹೆಸರು ಹೇಳಿ ಕರೆಯುತ್ತಿದ್ದವು. ಇಂದು karwa chouth....
ಚೆಲುವೆ ನಡೆದು ಬರುತ್ತಿರುವ ಹೆಜ್ಜೆಗಳನ್ನು ಅಲೆಗಳು ಮುತ್ತಿಕ್ಕಿ ಅಳಿಸುತ್ತಿವೆ. ಯಾರೋ ಕಟ್ಟಿರೋ ಮರಳು ಗೂಡನ್ನು ನಿಂತು ನೋಡಿ ಮತ್ತೆ ಮುಂದುವರೆದಳು.
ಕೈಗಳಲ್ಲಿ ಬಳೆಗಳು,ಕಾಲ್ಗೆಜ್ಜೆ, ಶ್ವೇತ ರಂಗಿನ ಸಲ್ವಾರ್ ಎಲ್ಲ ಆ ಸಂಜೆಗೆ ಹೇಳಿ ಮಾಡಿಸಿದ ಸಂಗೀತವಾಗಿತ್ತು.
ಅವಳ ಕಣ್ಣಿನಲಿ ಮೂಡಿದ ಒಂಟಿ ಹನಿಯಲಿ ಮರೆಯಾಗುತ್ತಿರುವ ಸೂರ್ಯನ ಕಿರಣ ಬಂದು ತನ್ನ ಬಿಂಬವ ಹುಡುಕಿತ್ತು.
ಅವಳು ಯಾರನ್ನೋ ಹುಡುಕುತ್ತಿರುವುದು ಸ್ಪಷ್ಟವಾಗಿತ್ತು.....

ತನ್ನ ಚೀಲದಿಂದ 4 ಕಾಗದದ ಚೀಟಿಗಳನ್ನ ತೆಗೆದು... ಒಂದೊಂದಾಗಿ ಓದಿ...ಮಣ್ಣಿನಲ್ಲಿ ಚಿಕ್ಕ ಹೊಂಡಗಳನ್ನ ತೆಗೆದು ಹೂಳುತ್ತಿದ್ದಳು.
ನಾಲ್ಕನೇ ಚೀಟಿಯನ್ನು ಓದಿ...ಅಲ್ಲೇ ಸ್ವಲ್ಪ ಹೊತ್ತು ಕುಳಿತು...ಸೂರ್ಯ ಮುಳುಗಿದ ಮೇಲೆ ಅಲ್ಲಿಂದ ಹೊರಟು ಹೋದಳು.
ಅಲ್ಲೇ ಅಣತಿ ದೂರದಲ್ಲಿ ಕುಳಿತು ಚಂದ್ರನಲ್ಲಿ ತನ್ನ ಪ್ರಿಯತಮನ ಮುಖ ಕಲ್ಪಿಸಿಕೊಂಡು ಬ್ಲಾಗ್ ಗೆ ಕಥೆ ಕಟ್ ಮಾಡ್ತಿದ್ದ ನಮ್ಮ ಲೇಖಕಿ ಇವನ್ನೆಲ್ಲ ಕಣ್ಣು ಮಿಟುಕಿಸದೆ ನೋಡುತಿದ್ದಳು...ಅವಳು ಹೋಗಿದ್ದೇ ತಡ... ಓಡಿ ಹೋಗಿ ಆ ಚೀಟಿಗಳನ್ನೆಲ್ಲ ಎತ್ತಿಕೊಂಡು ಜೇಬಿಗಿಳಿಸಿಕೊಂಡಳು.

ಅವಳಿಗೆ ಅವನ್ನೆಲ್ಲ ಓದುವವರೆಗೆ ಸಮಾಧಾನವಿರಲಿಲ್ಲ. ಒಮ್ಮೆಲೆ ತನ್ನ honda activa ಎತ್ತುಕೊಂಡು ಮನೆ ಕಡೆ ಹೊರಟಳು.
ಮರುದಿನ ಮುಂಜಾನೆಗೆ ಅವಳ ಬ್ಲಾಗ್ ಗೆ ಹೊಸ ಕಥೆ ಸೇರ್ಪಡೆ ಆಗಿತ್ತು.
"ಯಾರೋ ಬರೆದ ಮೂರು ಬದುಕು"

ಪತ್ರ  #1
happy-karwa-chauth-wallpapers-2013
ಗೆಳೆಯ,
ಆ ದಿನ ಕರ್ವಾ ಚೌತ್...(2009ನೆಯ)  ಮುಂಚಿನ ದಿನ ಅದೇನಕ್ಕೊ ಜಗಳ ಆಡಿದ್ವಿ ನಾವು...
ಅದೆಷ್ಟು ಕೋಪ ಇತ್ತು ನಿನಗೆ???
 ಅಬ್ಬಾ....ಮನೆಯಲ್ಲಿ ಮೊಬೈಲ್ ನಾ ಸ್ವಿಚ್ ಆಫ್ ಮಾಡಿ ಎಲ್ಲಿಗೋ ಹೋಗಿ ಮರುದಿನ ಮನೆಗೆ ಬಂದಿದ್ದೆ. ಆ ದಿನ ರಾತ್ರಿ ನಿದ್ದೆನೇ ಮಾಡಿರ್ಲಿಲ್ಲ ನಾನು. ನಿಮ್ಮ ಮನೆ landline ಗೆ ಅದೆಷ್ಟು ಸರಿ ಕಾಲ್ ಮಾಡಿದ್ದೆ ಅಂತ..ನಿಮ್ಮಮ್ಮ ಮರುದಿನ "ರಾತ್ರಿ ಇಡೀ unknown ನಂಬರ್ ಗಳಿಂದ ಫೋನ್ ಕಾಲ್ ಅಂತ" ಮರುದಿನ ಬೈದಾಗ ಗೊತ್ತಾಗಿತ್ತು ನಿನಗೆ.

ನಾನು ಇವತ್ತು ಉಪವಾಸ ಮಾಡಿದೀನಿ ಅಂತ ಕಳಿಸಿದ ಒಂದು ಮೆಸೇಜ್ ಗೆ ನಿನ್ನ ಕೋಪ ಕರಗಿ(?) "ಯಾಕೆ?" ಅನ್ನೋ reply ಬಂದಾಗ ಅದೆಷ್ಟು ಖುಷಿ ಪಟ್ಟಿದ್ದೆ ನಾನು....
"ಕರ್ವಾ ಚೌತ್" ಇವತ್ತು ಅಂದಾಗ... ನೀನು reply ಮಾಡಲು ತೆಗೆದುಕೊಂಡ ಆ 2 ನಿಮಿಷ 13 ಸೆಕೆಂಡ್ ಗಳ ಟೈಮ್ ಇತ್ತಲ್ಲಾ......ನಮ್ಮ ಏಳೇಳು ಜನುಮದ ಪ್ರೀತಿಯನ್ನ ಒಟ್ಟಿಗೆ ಕೂಡಿಸಿ ಹಾಲಿನ ಲೋಟದಲ್ಲಿ ಇಟ್ಟು ಕುಡಿ ಅಂತ ಪಕ್ಕದಲ್ಲಿ ಇಟ್ಟು ನನ್ನ ಕಣ್ಣ ನೋಟದಲ್ಲಿ ನೀನು ಬೆರೆತಂತಿತ್ತು.
"ಓ...ಈ ದಿನ ನೀನು ಬೆಳದಿಂಗಳ ನೆರಳಲ್ಲಿ, ನನ್ನ ಮುಖ ನೋಡಬೇಕು ಅಲ್ವಾ? , ಆ ಹಿಟ್ಟು ಗಾಳಿಸೋ....." ಜೊತೆ ಎರಡು smiley ಜೊತೆ ಮುಕ್ತಾಯದ ನಿನ್ನ reply ಗೆ...
"ಹೋಗೋ...ನಿನ್ನ ಮುಖ ಯಾಕೆ ನೋಡ್ಲಿ?, ಚಂದ್ರನ್ನ ನೋಡಿದರೆ ಸಾಕು" ಅನ್ನೋ ತುಂಟತನದ ನನ್ನ ಉತ್ತರಕ್ಕೆ ಮತ್ತೆ ನೀನು ಕಾಲ್ ಮಾಡಿ ಮಾತನಾಡದೆ ಕಟ್ ಮಾಡಿದ ಮಧ್ಯದಲ್ಲಿ... ನಿನ್ನ ಬಿಸಿ ಉಸಿರು ಕೇಳಿಸಿತ್ತು..ನನಗೆ.

"ಸಂಜೆ 6 ಗಂಟೆಗೆ ಕೂಡ್ಲೆ ಬೀಚ್ ಅಲ್ಲಿ ಕಾಯುತ್ತಿರುತ್ತೇನೆ....
ಬರುವಾಗ ಕೈ ಬೀಸಿಕೊಂಡು ಬರ್ಬೇಡಾ...ಅಪ್ಪು ಅಂಗಡಿಯಿಂದ ನನಗೆ ಒಂದು ಮಸಾಲಾ ಪುರಿ ನಿನಗೆ ಒಂದು ಬೆಲ್ಪುರಿ ತಗೊಂಡ್ ಬಾ..." ಅಂದಾಗ..ನೀನು smiley ಕಳಿಸಿದ್ದೇ....
ಪಾಪ ಕಣೋ ನೀನು...ನಿನಗೆ ಮೆನೂ ಬುಕ್ ಎ ಇರ್ಲಿಲ್ಲ... ನಾನ್ ಹೇಳಿದ್ದನ್ನೇ ತಿಂತಿದ್ದೆ...ಯಾಕೋ ಅಷ್ಟು ಇಷ್ಟ ಆದೆ ನೀನು?

ಆರು ಘಂಟೆ ಆಗಲು 3 ಘಂಟೆಗಳಿತ್ತು. ಆ ಸಮಯ ಅಪ್ಪಾ...!!!
ನೀನು ಹೇಳಿದ ಮಾತಿಗೆ ಅದೆಷ್ಟು ಮಹತ್ವ ಕೊಡುತ್ತಿದ್ದೆ ನೀನು? exact ಆರಕ್ಕೆ ನನ್ನ ಕಣ್ಣು ಮುಂದೆ ಇದ್ದೇ ನೀನು...ಇದೇ ಜಾಗದಲ್ಲಿ.
ನಿನ್ನ ಸ್ಟೈಲ್ ನಲ್ಲಿ  ಅಲ್ಲಿ ಒಮ್ಮೆ ಮೇಲೆ ನೋಡಿ...ನನ್ನ ನೋಡಿ. ಆ ತಿಂಡಿಯ ಕವರನ್ನು ನನ್ನ ಕೈಗೆ ಕೊಟ್ಟು, ಆ ಕಡೆ ತಿರುಗಿ ನಿಂತಿದ್ದೆ.
 ನಮ್ಮ ಪ್ರೀತಿ ಶುರುವಾಗಿ ಆ ದಿನ 8 ತಿಂಗಳ ಹತ್ತಿರ ಹತ್ತಿರ ಆಗಿತ್ತು.
 ನಿನ್ನ ಮುಂದೆ ಬಂದು..."ಮೋಡ ಇದೆ ಕಣೋ...ಚಂದ್ರ ಕಾಣಿಸ್ತಿಲ್ಲ. ನನಗೆ ನೀನೇ ಸಾಕು " ಅಂತ ಹೇಳಿ ಮೊದಲ ಸಾರಿ ನಿನ್ನ ಕಾಲನ್ನು ಮುಟ್ಟಿ ನಮಸ್ಕರಿಸಿದ್ದೆ.
 "ನೀನು ಮೌನಿಯಾಗಿದ್ದೆ ಕೆಲ ಕ್ಷಣ..., ನಿನ್ನ ತೋಳಲ್ಲಿ ಬಂಧಿಯಾಗಿ..ಉಸಿರಾಡಲು ಒದ್ದಾಡಿದ್ದೆ."

ಮತ್ತೆ ಈ ತೀರದಲ್ಲಿ ಆ ದಿನ ಬರಲಿ....

ಇಂತಿ ನಿನ್ನ,

ಅಂದು ಬರೆದ ಹೆಸರಿನ(?) ಕೆಳಗಡೆ ಅವಳ ಕಣ್ಣೀರ ಕಲೆಯಿತ್ತು.





ಪತ್ರ  #2
2149696743-day-290-265-in-search-of-a-title-emo-background
ಪ್ರೀತಿಯ ಸೈನಿಕ ಗಂಡ,

"ಮರೆತೆಯಾ ಮರೆಯುವ ಮುನ್ನ?
ಹೊರಟೆಯಾ ಕರೆಯದೆ ನನ್ನ?......."

ಇದು ನೀನು ನನಗೆ ಬರೆದ ಕೊನೆಯ ಕವನ...ನಮ್ಮ ಮದುವೆ ಆಗಿ ಇದು ಮೊದಲ ಕರ್ವಾ ಚೌತ್(2011ನೆಯ). ನಿನ್ನ ದೇಶ ಸೇವೆಯ ಗೊಂದಲ ಗಲಾಟೆಗಳಲ್ಲಿ ನನಗಂತ ಟೈಮ್ ಏ ಇಲ್ಲ ಕಣೋ ನಿನಗೆ.... ಮನೆಯವರಿಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆಯಾಗಿ, ಅವರಿಂದ ದೂರವಾದ ದಿನದಿಂದ ನನಗೆ ನೀನೊಬ್ಬನೇ ಕಣೋ ಪ್ರಪಂಚ.
ನೀನು ಜೊತೆಯಿರದ ಸಮಯದಲ್ಲೆಲ್ಲ ನಿನ್ನ, ಅಪ್ಪ,ಅಮ್ಮ ,ಪುಟ್ಟಿ ಇವರನ್ನೆಲ್ಲ ಎಷ್ಟು miss ಮಾಡ್ಕೊತಿನಿ ಗೊತ್ತಾ??
ಯಾವಾಗ ನೋಡಿದರೂ ದೇಶ...ದೇಶ...ದೇಶ.. ನಿನಗೆ.... ಆದರೂ ಕಷ್ಟ ಪಟ್ಟು ನನಗೋಸ್ಕರ ಒದ್ದಾಡಿ ಅವಾಗವಾಗ  ಬಿಡುವು ಮಾಡಿಕೊಂಡು ಬರ್ತಿಯಲ್ಲ ಅದೇ ಖುಷಿ ಕಣೋ ಸೈನಿಕ ನನಗೆ.

ಮುಂಚೆ ಚೆನ್ನಾಗಿತ್ತು ಕಣೋ...ಕವಿಯಾಗಿದ್ದೆ ನೀನು. ಇವಾಗ ಬಾರಿ ಬಾರ್ಡರ್,ಮೇಜರ್,ತುಕಡಿ, ಅದು ಇದು..ಅಂದ್ಕೊಂಡು ಏನೇನೋ ಮಾತಾಡ್ತೀಯಾ. ಮುಂಚೆ ಆದ್ರೆ ಇವತ್ತಿನ ದಿನಾನ ಎಂಜಾಯ್ ಮಾಡಬೇಕು ಅಂತಿದ್ದ ನೀನು ಇವಾಗ ಮಾತು ಎತ್ತಿದರೆ ದೇಶ, ನಮ್ಮ ಮಕ್ಕಳ future ಅಂತೀಯಾ...

ಮುಂಚಿನ ದಿನ ಬೆಳಿಗ್ಗೇನೇ ಕಾಲ್ ಮಾಡಿ ... "ಸೋನು,ಇವತ್ತು ರಾತ್ರಿ ಹೊರಡ್ತೀನಿ..ದೇವಸ್ಥಾನಕ್ಕೆ ಹೋಗೋಣ..ಅಂದಾಗ, ನಾನು ನಿದ್ದೆಗಣ್ಣಲ್ಲೇ "ಹ್ಯಾಪೀ ಕರ್ವಾ ಚೌತ್ ಇನ್ advance" ಅಂದಿದ್ದೆ.

ಆ ದಿನ ಬೆಳಿಗ್ಗೆಯಿಂದ ಸಂಜೆ ಚಂದ್ರ  ಮುಳುಗುವ ವರೆಗೂ ನೀನು ಹೇಳೋ "ಹಿಟ್ಟು ಗಾಳಿಸೋದು..." ಹಿಡಕೊಂಡು ಕೂತಿದ್ದೆ ಕಣೋ...ಉಪವಾಸ ಬೇರೇ....
ಕಳ್ಳ ಕಣೋ ನೀನು... ನಿನ್ನ ಮಾತು ತಪ್ಪಬಾರದು...ನಿನ್ನ so called ಟೈಮ್ ಸೆನ್ಸ್ tredz ನಾ ಮೇನ್‌ಟೇನ್ ಮಾಡಕ್ಕೆ ಟೈಮ್ ಹೇಳೋದನ್ನೇ ನಿಲ್ಲಿಸಿ ಬಿಟ್ಟಿದಿಯಾ ಇವಾಗಿವಾಗ.
ಯಾವಾಗ ನೋಡಿದ್ರು ಸಂಜೆ, ಬೆಳಿಗ್ಗೆ ಅಂತೀಯಾ...ಮುಂಚೆ ಆದ್ರೆ ... "ಶಾರ್ಪ್ 6:25, 8:13" ಅಂತ ಎಲ್ಲ ಹೇಳ್ತಿದ್ದೆ.
ಒಂದು ತರ ಬೇಜಾರು ಆಗತ್ತೆ ಕಣೋ...ಇದ್ದು ಇರದೇ....

ನೀನು ಬರಲೇ ಇಲ್ಲ ಊರಿಗೆ...ನೀನೂ ಇರಲಿಲ್ಲ,ನಿನ್ನ ಮಳೆನೂ ಬರಲಿಲ್ಲ.
ಎಷ್ಟು ಅತ್ತಿದ್ದೆ ಆ ದಿನ. ಕೊನೆಗೂ ಕಾಯೋ ಆಟದ ನಂತರ.. ನೀನು ಫೋನ್ ಮಾಡಿ "ಕಾಶ್ಮೀರ, ಪಾಕಿಸ್ತಾನ, ಸೆಕ್ಯೂರಿಟೀ" ಅಂತ ಏನೇನೋ ಹೇಳಿ ನನಗೆ ಸಮಾಧಾನ ಮಾಡಿದ್ದೆ. ಅದು ಒಂದು ಕಲೆ ಕಣೋ...ಅದೆಷ್ಟು ಕೋಪ
ಇದ್ದರೂ ನನ್ನ ಮೇಣದ ತರ ಕರಗಿಸಿ ಬಿಡುತ್ತಿದ್ದೆ.

ನಿನಗೆ ಪುಟ್ಟ ಮಕ್ಕಳು ಅಂದ್ರೆ ಇಷ್ಟ ಅಲಾ...?? ನಮ್ಮ ಮಕ್ಕಳ ನಾಮಕರಣ ಬೇರೆ ಮಾಡಿ ಬಿಟ್ಟಿದ್ದೆ ನೀನು....
ನೆನಪಿದೆಯಾ ನಿನಗೆ?? ಮದುವೆ ಮುಂಚೆ ಎಷ್ಟೋ ಸರಿ ಕೇಳಿದ್ದೆ ನಾನು...
"ನಮಗೆ ಮದುವೆ ಆದ ಮೇಲೆ... ಮಕ್ಕಳು ಆಗ್ತಾರಲ್ಲಾ...ಆವಾಗ ನೀನು ನನ್ನ ಜಾಸ್ತಿ ಪ್ರೀತಿಸ್ತೀಯಾ?? ಇಲ್ಲ ಮಕ್ಕಳನ್ನ??? " ಅಂತ ಕೇಳಿದ ಪ್ರತಿ ಬಾರಿ...ನೀನು
"ನಿನ್ನನ್ನ...ಕಣೆ.ನಿನಗೆ ಇನ್ನೂ ಡೌಟ್ ಇದ್ದರೆ ನಮಗೆ ಮಕ್ಕಳೇ ಬೇಡ..ನೀನೇ ನನ್ನ ಪಾಪು" ಅಂತಿದ್ದೆ.
ಈ ಮಾತು ಕೇಳಿದಾಗ ಪ್ರತಿ ಸರಿ ನಾನು ಅಳುತ್ತಿದ್ದೆ.
ಇವಾಗ ಅನಿಸುತ್ತಿದೆ.. ನೀನು ಮಕ್ಕಳನ್ನು ಪ್ರೀತಿಸಿದರೂ ನಡೆಯುತ್ತಿತ್ತು...
ನನ್ನ ಹುಚ್ಚು ಪ್ರಶ್ನೆಯಲ್ಲಿ ಆ "ದೇಶ" ಅನ್ನೋ ಪದ ಏನಕ್ಕೆ ಇರಲಿಲ್ಲ? ಅಂತ.

ಇಂತಿ ನಿನ್ನ,




#3
bhavi
ಪ್ರೀತಿಯ ಗಂಡ,
ನೀನು ಇರದ ಮೂರನೆಯ ಕರ್ವಾ ಚೌತ್ ಇದು(2013). ನಿನ್ನ ನೋಡಿ ಎರಡು ವರ್ಷದ ಮೇಲಾಯಿತು. ಎಲ್ಲೋ ಮರೆಯಲ್ಲಿ ನಿಂತು ಮರೆವಿಗಾಗಿ ಎದುರು ನೋಡುತ್ತಿರುವೆಯಾ?
ನಮ್ಮ ಮಗುವಿನ ಅಳು ಒಮ್ಮೆಯೂ ಕೇಳಿಸಿಲ್ವಾ ನಿನಗೆ? ನಾನು ನೆನಾಪಾಗೆ ಇಲ್ವಾ?
ನೀನು ಸತ್ತಿಲ್ಲ ಕಣೋ. ಇಂದು ಅಲ್ಲ ನಾಳೆ ಬಂದೇ ಬರುತಿಯಾ ಅಂತ ಗೊತ್ತು ನನಗೆ.
ಪ್ರತಿ ದಾರಿಯೂ ನಿನ್ನಲ್ಲಿಗೆ ಹೋಗುವುದು ಎಂಬ ನಂಬಿಕೆಯಲ್ಲಿ ಅಲೆಮಾರಿ ಆಗೋಗಿದೀನಿ ಕಣೋ ನಾನು. ಚಂದ್ರನ ನೋಡಿದರೆ ಭಯ ಆಗತ್ತೆ. ಮಳೆ ಯಾಕಾದರೂ ಬರುತ್ತೆ ? ಅನಿಸುತ್ತೆ. ಒಬ್ಬಂಟಿ ಆಗಿದ್ದ ನನ್ನ, ಮಗುನಾ ಕೊನೆಗೂ ಮನೆಯವರು ಬಿಡದೆ ಕರೆದುಕೊಂಡು ಬಂದರು. ಮಗು ಇನ್ನೂ ವರೆಗೂ "ಅಮ್ಮ" ಅಂದಿಲ್ಲ ಗೊತ್ತಾ???
ಪ್ರತಿ ಸಾರಿ ಅಪ್ಪ ಅಂತಾನೆ ಕೂಗತ್ತೆ. ನನ್ನ ಕೂಡ....
ಅದಕ್ಕೆ ಇವಾಗ ಒಂದು ವರೆ ವರ್ಷ.
ಎಲ್ಲಿ ಹುಡುಕಲಿ ನಿನ್ನ? ಎಲ್ಲರೂ ಮಾತಾಡಿಕೊಳ್ಳೋದು ನಿಜ ಅಲ್ಲ ಅಲ್ವಾ? ಕೊಟ್ಟ ಮಾತು ಮರೆಯಲ್ಲ ನೀನು. ನಮ್ಮ ಮೊಮ್ಮಕ್ಕಳ ಜೊತೆ ನಾವು ಆಟ ಆಡಬೇಕಾಗಿದ್ದು ಮರೆವೆಯಾ? ನಮ್ಮ ಪ್ರೀತಿಯ ಕಥೆ ಅವರಿಗೆ ಹೇಳದೆ ಹೊರಡುವೆಯಾ? ನನ್ನ ಕೊನೆಯ ಉಸಿರಾಟದಲ್ಲಿ ನೀನಿರಬೇಕು,ಅದು ನಿನ್ನ ತೋಳಲ್ಲಿ ನಿಲ್ಲಬೇಕು ಅನ್ನೋ ನನ್ನ ಆಸೆಯಾದ್ರೂ ನೆನಪಿದೆ ಅಲ್ವಾ?
ಎಲ್ಲೋ ಇದೀಯಾ ಕಣೋ ನೀನು. ಪಾಪದವನು ಮನೆ ವಿಳಾಸ ಮರೆತಿರ್ತೀಯಾ..
ಅಳು ಬರತ್ತೆ ಕಣೋ. ಮಗೂಗೆ ನೀನೇ ಹೆಸರಿಡಬೇಕು ಅಂತ ಇನ್ನಾ ಹೆಸರಿಟ್ತಿಲ್ಲ ಗೊತ್ತಾ?
ಎಲ್ಲ ಸ್ವಾರ್ಥಿಗಳು. ನೀನು ಬದುಕಿದ್ದರೂ ಮನೆಯವರು ಮಾರಣಾಂತಿಕ ಎಲ್ಲ ಮಾಡಿ ದೊಡ್ಡದಾಗಿ ಪೇಪರ್ ನಲ್ಲಿ ಫೋಟೋ ಎಲ್ಲ ಹಾಕಿಸಿದಾರೆ. ಯಾರೋ ಹೇಳಿದ್ದು ಅವರಿಗೆ ನೀನು ಬದುಕಿಲ್ಲ ಅಂತ.??
ಪ್ರತಿ ಮುಂಜಾನೆ ಮನೆಯಲ್ಲಿ ಒಂದೇ ಸುಪ್ರಭಾತ. ನಿನಗೋಸ್ಕರ ಅಲ್ಲದಿದ್ದರೂ ಮಗುವಿಗಾಗಿ ಆದರೂ ಒಂದು ಮದುವೆ ಮಾಡಿಕೊ ಅಂತ. ಮನೆಯಲ್ಲಿ ಇರೋಕು ಆಗ್ತಿಲ್ಲ ಕಣೋ. ಇಲ್ನೋಡು...ಈ ನಿನ್ನ ಹಿಟ್ಟು ಗಾಳಿಸೋದು ಕೂಡ ತುಕ್ಕು ಹಿಡಿಯುತ್ತಿದೆ ನಿನ್ನ ನೆನಪಲ್ಲಿ..
ಏನೋ ಇದು ಬದುಕು ಹೀಗಾಗಿದೆ? ಎಲ್ಲೋ ತೀರಾ ಎಲ್ಲೋ ದೋಣಿ.
ಪ್ರತಿ ಹೆಜ್ಜೆಯ ಸದ್ದಲು ನಿನದೇ ನೆರಳು.
ಪ್ರತಿ ಹಕ್ಕಿಯ ಕೂಗಲೂ ನಿನದೇ ಹೆಸರು.
ಪ್ರತಿ ಬೆಳಕಲ್ಲೂ ನಿನದೇ ಶಾಖ.
ಕಾದ ದಾರಿಯಲ್ಲೆಲ್ಲ ಹೆಜ್ಜೆಗಳು ಸವೆದಿವೆ.


ಬಾರೋ ಬೇಗ...ಕೊಟ್ಟ ಮಾತು ಉಳಿಸಿಕೊಳ್ತೀಯಾ ಅಲಾ?


ಎಂದಿಗೂ ನಿನ್ನವಳು,



##################
ಇದೆಲ್ಲ ಓದಿದ ಮೇಲೆ...ನಮ್ಮ ಲೇಖಕಿ ಗೆ ನಾಲ್ಕನೆಯ ಪತ್ರದಲ್ಲಿ ಏನಿತ್ತು ಅಂತ ಕೇಳಿದ ಪ್ರಶ್ನೆಗೆ ಉತ್ತರವಿರಲಿಲ್ಲ. :P
ಹೌದು... ಏನಿರಬಹುದು?