ಸೋಮವಾರ, ನವೆಂಬರ್ 25, 2013

ಯಾರೋ ಬರೆದ ಮೂರು ಬದುಕು

beach-aloneಆ ತೀರದಲ್ಲಿ ಸೂರ್ಯ ಕಣ್ಣು ಮುಚ್ಚುವ ಸಮಯ. ಅಲೆಯ ಅಬ್ಬರ ಚಂದ್ರನ ಹೆಸರು ಹೇಳಿ ಕರೆಯುತ್ತಿದ್ದವು. ಇಂದು karwa chouth....
ಚೆಲುವೆ ನಡೆದು ಬರುತ್ತಿರುವ ಹೆಜ್ಜೆಗಳನ್ನು ಅಲೆಗಳು ಮುತ್ತಿಕ್ಕಿ ಅಳಿಸುತ್ತಿವೆ. ಯಾರೋ ಕಟ್ಟಿರೋ ಮರಳು ಗೂಡನ್ನು ನಿಂತು ನೋಡಿ ಮತ್ತೆ ಮುಂದುವರೆದಳು.
ಕೈಗಳಲ್ಲಿ ಬಳೆಗಳು,ಕಾಲ್ಗೆಜ್ಜೆ, ಶ್ವೇತ ರಂಗಿನ ಸಲ್ವಾರ್ ಎಲ್ಲ ಆ ಸಂಜೆಗೆ ಹೇಳಿ ಮಾಡಿಸಿದ ಸಂಗೀತವಾಗಿತ್ತು.
ಅವಳ ಕಣ್ಣಿನಲಿ ಮೂಡಿದ ಒಂಟಿ ಹನಿಯಲಿ ಮರೆಯಾಗುತ್ತಿರುವ ಸೂರ್ಯನ ಕಿರಣ ಬಂದು ತನ್ನ ಬಿಂಬವ ಹುಡುಕಿತ್ತು.
ಅವಳು ಯಾರನ್ನೋ ಹುಡುಕುತ್ತಿರುವುದು ಸ್ಪಷ್ಟವಾಗಿತ್ತು.....

ತನ್ನ ಚೀಲದಿಂದ 4 ಕಾಗದದ ಚೀಟಿಗಳನ್ನ ತೆಗೆದು... ಒಂದೊಂದಾಗಿ ಓದಿ...ಮಣ್ಣಿನಲ್ಲಿ ಚಿಕ್ಕ ಹೊಂಡಗಳನ್ನ ತೆಗೆದು ಹೂಳುತ್ತಿದ್ದಳು.
ನಾಲ್ಕನೇ ಚೀಟಿಯನ್ನು ಓದಿ...ಅಲ್ಲೇ ಸ್ವಲ್ಪ ಹೊತ್ತು ಕುಳಿತು...ಸೂರ್ಯ ಮುಳುಗಿದ ಮೇಲೆ ಅಲ್ಲಿಂದ ಹೊರಟು ಹೋದಳು.
ಅಲ್ಲೇ ಅಣತಿ ದೂರದಲ್ಲಿ ಕುಳಿತು ಚಂದ್ರನಲ್ಲಿ ತನ್ನ ಪ್ರಿಯತಮನ ಮುಖ ಕಲ್ಪಿಸಿಕೊಂಡು ಬ್ಲಾಗ್ ಗೆ ಕಥೆ ಕಟ್ ಮಾಡ್ತಿದ್ದ ನಮ್ಮ ಲೇಖಕಿ ಇವನ್ನೆಲ್ಲ ಕಣ್ಣು ಮಿಟುಕಿಸದೆ ನೋಡುತಿದ್ದಳು...ಅವಳು ಹೋಗಿದ್ದೇ ತಡ... ಓಡಿ ಹೋಗಿ ಆ ಚೀಟಿಗಳನ್ನೆಲ್ಲ ಎತ್ತಿಕೊಂಡು ಜೇಬಿಗಿಳಿಸಿಕೊಂಡಳು.

ಅವಳಿಗೆ ಅವನ್ನೆಲ್ಲ ಓದುವವರೆಗೆ ಸಮಾಧಾನವಿರಲಿಲ್ಲ. ಒಮ್ಮೆಲೆ ತನ್ನ honda activa ಎತ್ತುಕೊಂಡು ಮನೆ ಕಡೆ ಹೊರಟಳು.
ಮರುದಿನ ಮುಂಜಾನೆಗೆ ಅವಳ ಬ್ಲಾಗ್ ಗೆ ಹೊಸ ಕಥೆ ಸೇರ್ಪಡೆ ಆಗಿತ್ತು.
"ಯಾರೋ ಬರೆದ ಮೂರು ಬದುಕು"

ಪತ್ರ  #1
happy-karwa-chauth-wallpapers-2013
ಗೆಳೆಯ,
ಆ ದಿನ ಕರ್ವಾ ಚೌತ್...(2009ನೆಯ)  ಮುಂಚಿನ ದಿನ ಅದೇನಕ್ಕೊ ಜಗಳ ಆಡಿದ್ವಿ ನಾವು...
ಅದೆಷ್ಟು ಕೋಪ ಇತ್ತು ನಿನಗೆ???
 ಅಬ್ಬಾ....ಮನೆಯಲ್ಲಿ ಮೊಬೈಲ್ ನಾ ಸ್ವಿಚ್ ಆಫ್ ಮಾಡಿ ಎಲ್ಲಿಗೋ ಹೋಗಿ ಮರುದಿನ ಮನೆಗೆ ಬಂದಿದ್ದೆ. ಆ ದಿನ ರಾತ್ರಿ ನಿದ್ದೆನೇ ಮಾಡಿರ್ಲಿಲ್ಲ ನಾನು. ನಿಮ್ಮ ಮನೆ landline ಗೆ ಅದೆಷ್ಟು ಸರಿ ಕಾಲ್ ಮಾಡಿದ್ದೆ ಅಂತ..ನಿಮ್ಮಮ್ಮ ಮರುದಿನ "ರಾತ್ರಿ ಇಡೀ unknown ನಂಬರ್ ಗಳಿಂದ ಫೋನ್ ಕಾಲ್ ಅಂತ" ಮರುದಿನ ಬೈದಾಗ ಗೊತ್ತಾಗಿತ್ತು ನಿನಗೆ.

ನಾನು ಇವತ್ತು ಉಪವಾಸ ಮಾಡಿದೀನಿ ಅಂತ ಕಳಿಸಿದ ಒಂದು ಮೆಸೇಜ್ ಗೆ ನಿನ್ನ ಕೋಪ ಕರಗಿ(?) "ಯಾಕೆ?" ಅನ್ನೋ reply ಬಂದಾಗ ಅದೆಷ್ಟು ಖುಷಿ ಪಟ್ಟಿದ್ದೆ ನಾನು....
"ಕರ್ವಾ ಚೌತ್" ಇವತ್ತು ಅಂದಾಗ... ನೀನು reply ಮಾಡಲು ತೆಗೆದುಕೊಂಡ ಆ 2 ನಿಮಿಷ 13 ಸೆಕೆಂಡ್ ಗಳ ಟೈಮ್ ಇತ್ತಲ್ಲಾ......ನಮ್ಮ ಏಳೇಳು ಜನುಮದ ಪ್ರೀತಿಯನ್ನ ಒಟ್ಟಿಗೆ ಕೂಡಿಸಿ ಹಾಲಿನ ಲೋಟದಲ್ಲಿ ಇಟ್ಟು ಕುಡಿ ಅಂತ ಪಕ್ಕದಲ್ಲಿ ಇಟ್ಟು ನನ್ನ ಕಣ್ಣ ನೋಟದಲ್ಲಿ ನೀನು ಬೆರೆತಂತಿತ್ತು.
"ಓ...ಈ ದಿನ ನೀನು ಬೆಳದಿಂಗಳ ನೆರಳಲ್ಲಿ, ನನ್ನ ಮುಖ ನೋಡಬೇಕು ಅಲ್ವಾ? , ಆ ಹಿಟ್ಟು ಗಾಳಿಸೋ....." ಜೊತೆ ಎರಡು smiley ಜೊತೆ ಮುಕ್ತಾಯದ ನಿನ್ನ reply ಗೆ...
"ಹೋಗೋ...ನಿನ್ನ ಮುಖ ಯಾಕೆ ನೋಡ್ಲಿ?, ಚಂದ್ರನ್ನ ನೋಡಿದರೆ ಸಾಕು" ಅನ್ನೋ ತುಂಟತನದ ನನ್ನ ಉತ್ತರಕ್ಕೆ ಮತ್ತೆ ನೀನು ಕಾಲ್ ಮಾಡಿ ಮಾತನಾಡದೆ ಕಟ್ ಮಾಡಿದ ಮಧ್ಯದಲ್ಲಿ... ನಿನ್ನ ಬಿಸಿ ಉಸಿರು ಕೇಳಿಸಿತ್ತು..ನನಗೆ.

"ಸಂಜೆ 6 ಗಂಟೆಗೆ ಕೂಡ್ಲೆ ಬೀಚ್ ಅಲ್ಲಿ ಕಾಯುತ್ತಿರುತ್ತೇನೆ....
ಬರುವಾಗ ಕೈ ಬೀಸಿಕೊಂಡು ಬರ್ಬೇಡಾ...ಅಪ್ಪು ಅಂಗಡಿಯಿಂದ ನನಗೆ ಒಂದು ಮಸಾಲಾ ಪುರಿ ನಿನಗೆ ಒಂದು ಬೆಲ್ಪುರಿ ತಗೊಂಡ್ ಬಾ..." ಅಂದಾಗ..ನೀನು smiley ಕಳಿಸಿದ್ದೇ....
ಪಾಪ ಕಣೋ ನೀನು...ನಿನಗೆ ಮೆನೂ ಬುಕ್ ಎ ಇರ್ಲಿಲ್ಲ... ನಾನ್ ಹೇಳಿದ್ದನ್ನೇ ತಿಂತಿದ್ದೆ...ಯಾಕೋ ಅಷ್ಟು ಇಷ್ಟ ಆದೆ ನೀನು?

ಆರು ಘಂಟೆ ಆಗಲು 3 ಘಂಟೆಗಳಿತ್ತು. ಆ ಸಮಯ ಅಪ್ಪಾ...!!!
ನೀನು ಹೇಳಿದ ಮಾತಿಗೆ ಅದೆಷ್ಟು ಮಹತ್ವ ಕೊಡುತ್ತಿದ್ದೆ ನೀನು? exact ಆರಕ್ಕೆ ನನ್ನ ಕಣ್ಣು ಮುಂದೆ ಇದ್ದೇ ನೀನು...ಇದೇ ಜಾಗದಲ್ಲಿ.
ನಿನ್ನ ಸ್ಟೈಲ್ ನಲ್ಲಿ  ಅಲ್ಲಿ ಒಮ್ಮೆ ಮೇಲೆ ನೋಡಿ...ನನ್ನ ನೋಡಿ. ಆ ತಿಂಡಿಯ ಕವರನ್ನು ನನ್ನ ಕೈಗೆ ಕೊಟ್ಟು, ಆ ಕಡೆ ತಿರುಗಿ ನಿಂತಿದ್ದೆ.
 ನಮ್ಮ ಪ್ರೀತಿ ಶುರುವಾಗಿ ಆ ದಿನ 8 ತಿಂಗಳ ಹತ್ತಿರ ಹತ್ತಿರ ಆಗಿತ್ತು.
 ನಿನ್ನ ಮುಂದೆ ಬಂದು..."ಮೋಡ ಇದೆ ಕಣೋ...ಚಂದ್ರ ಕಾಣಿಸ್ತಿಲ್ಲ. ನನಗೆ ನೀನೇ ಸಾಕು " ಅಂತ ಹೇಳಿ ಮೊದಲ ಸಾರಿ ನಿನ್ನ ಕಾಲನ್ನು ಮುಟ್ಟಿ ನಮಸ್ಕರಿಸಿದ್ದೆ.
 "ನೀನು ಮೌನಿಯಾಗಿದ್ದೆ ಕೆಲ ಕ್ಷಣ..., ನಿನ್ನ ತೋಳಲ್ಲಿ ಬಂಧಿಯಾಗಿ..ಉಸಿರಾಡಲು ಒದ್ದಾಡಿದ್ದೆ."

ಮತ್ತೆ ಈ ತೀರದಲ್ಲಿ ಆ ದಿನ ಬರಲಿ....

ಇಂತಿ ನಿನ್ನ,

ಅಂದು ಬರೆದ ಹೆಸರಿನ(?) ಕೆಳಗಡೆ ಅವಳ ಕಣ್ಣೀರ ಕಲೆಯಿತ್ತು.





ಪತ್ರ  #2
2149696743-day-290-265-in-search-of-a-title-emo-background
ಪ್ರೀತಿಯ ಸೈನಿಕ ಗಂಡ,

"ಮರೆತೆಯಾ ಮರೆಯುವ ಮುನ್ನ?
ಹೊರಟೆಯಾ ಕರೆಯದೆ ನನ್ನ?......."

ಇದು ನೀನು ನನಗೆ ಬರೆದ ಕೊನೆಯ ಕವನ...ನಮ್ಮ ಮದುವೆ ಆಗಿ ಇದು ಮೊದಲ ಕರ್ವಾ ಚೌತ್(2011ನೆಯ). ನಿನ್ನ ದೇಶ ಸೇವೆಯ ಗೊಂದಲ ಗಲಾಟೆಗಳಲ್ಲಿ ನನಗಂತ ಟೈಮ್ ಏ ಇಲ್ಲ ಕಣೋ ನಿನಗೆ.... ಮನೆಯವರಿಗೆ ಇಷ್ಟವಿಲ್ಲದೇ ಪ್ರೀತಿಸಿ ಮದುವೆಯಾಗಿ, ಅವರಿಂದ ದೂರವಾದ ದಿನದಿಂದ ನನಗೆ ನೀನೊಬ್ಬನೇ ಕಣೋ ಪ್ರಪಂಚ.
ನೀನು ಜೊತೆಯಿರದ ಸಮಯದಲ್ಲೆಲ್ಲ ನಿನ್ನ, ಅಪ್ಪ,ಅಮ್ಮ ,ಪುಟ್ಟಿ ಇವರನ್ನೆಲ್ಲ ಎಷ್ಟು miss ಮಾಡ್ಕೊತಿನಿ ಗೊತ್ತಾ??
ಯಾವಾಗ ನೋಡಿದರೂ ದೇಶ...ದೇಶ...ದೇಶ.. ನಿನಗೆ.... ಆದರೂ ಕಷ್ಟ ಪಟ್ಟು ನನಗೋಸ್ಕರ ಒದ್ದಾಡಿ ಅವಾಗವಾಗ  ಬಿಡುವು ಮಾಡಿಕೊಂಡು ಬರ್ತಿಯಲ್ಲ ಅದೇ ಖುಷಿ ಕಣೋ ಸೈನಿಕ ನನಗೆ.

ಮುಂಚೆ ಚೆನ್ನಾಗಿತ್ತು ಕಣೋ...ಕವಿಯಾಗಿದ್ದೆ ನೀನು. ಇವಾಗ ಬಾರಿ ಬಾರ್ಡರ್,ಮೇಜರ್,ತುಕಡಿ, ಅದು ಇದು..ಅಂದ್ಕೊಂಡು ಏನೇನೋ ಮಾತಾಡ್ತೀಯಾ. ಮುಂಚೆ ಆದ್ರೆ ಇವತ್ತಿನ ದಿನಾನ ಎಂಜಾಯ್ ಮಾಡಬೇಕು ಅಂತಿದ್ದ ನೀನು ಇವಾಗ ಮಾತು ಎತ್ತಿದರೆ ದೇಶ, ನಮ್ಮ ಮಕ್ಕಳ future ಅಂತೀಯಾ...

ಮುಂಚಿನ ದಿನ ಬೆಳಿಗ್ಗೇನೇ ಕಾಲ್ ಮಾಡಿ ... "ಸೋನು,ಇವತ್ತು ರಾತ್ರಿ ಹೊರಡ್ತೀನಿ..ದೇವಸ್ಥಾನಕ್ಕೆ ಹೋಗೋಣ..ಅಂದಾಗ, ನಾನು ನಿದ್ದೆಗಣ್ಣಲ್ಲೇ "ಹ್ಯಾಪೀ ಕರ್ವಾ ಚೌತ್ ಇನ್ advance" ಅಂದಿದ್ದೆ.

ಆ ದಿನ ಬೆಳಿಗ್ಗೆಯಿಂದ ಸಂಜೆ ಚಂದ್ರ  ಮುಳುಗುವ ವರೆಗೂ ನೀನು ಹೇಳೋ "ಹಿಟ್ಟು ಗಾಳಿಸೋದು..." ಹಿಡಕೊಂಡು ಕೂತಿದ್ದೆ ಕಣೋ...ಉಪವಾಸ ಬೇರೇ....
ಕಳ್ಳ ಕಣೋ ನೀನು... ನಿನ್ನ ಮಾತು ತಪ್ಪಬಾರದು...ನಿನ್ನ so called ಟೈಮ್ ಸೆನ್ಸ್ tredz ನಾ ಮೇನ್‌ಟೇನ್ ಮಾಡಕ್ಕೆ ಟೈಮ್ ಹೇಳೋದನ್ನೇ ನಿಲ್ಲಿಸಿ ಬಿಟ್ಟಿದಿಯಾ ಇವಾಗಿವಾಗ.
ಯಾವಾಗ ನೋಡಿದ್ರು ಸಂಜೆ, ಬೆಳಿಗ್ಗೆ ಅಂತೀಯಾ...ಮುಂಚೆ ಆದ್ರೆ ... "ಶಾರ್ಪ್ 6:25, 8:13" ಅಂತ ಎಲ್ಲ ಹೇಳ್ತಿದ್ದೆ.
ಒಂದು ತರ ಬೇಜಾರು ಆಗತ್ತೆ ಕಣೋ...ಇದ್ದು ಇರದೇ....

ನೀನು ಬರಲೇ ಇಲ್ಲ ಊರಿಗೆ...ನೀನೂ ಇರಲಿಲ್ಲ,ನಿನ್ನ ಮಳೆನೂ ಬರಲಿಲ್ಲ.
ಎಷ್ಟು ಅತ್ತಿದ್ದೆ ಆ ದಿನ. ಕೊನೆಗೂ ಕಾಯೋ ಆಟದ ನಂತರ.. ನೀನು ಫೋನ್ ಮಾಡಿ "ಕಾಶ್ಮೀರ, ಪಾಕಿಸ್ತಾನ, ಸೆಕ್ಯೂರಿಟೀ" ಅಂತ ಏನೇನೋ ಹೇಳಿ ನನಗೆ ಸಮಾಧಾನ ಮಾಡಿದ್ದೆ. ಅದು ಒಂದು ಕಲೆ ಕಣೋ...ಅದೆಷ್ಟು ಕೋಪ
ಇದ್ದರೂ ನನ್ನ ಮೇಣದ ತರ ಕರಗಿಸಿ ಬಿಡುತ್ತಿದ್ದೆ.

ನಿನಗೆ ಪುಟ್ಟ ಮಕ್ಕಳು ಅಂದ್ರೆ ಇಷ್ಟ ಅಲಾ...?? ನಮ್ಮ ಮಕ್ಕಳ ನಾಮಕರಣ ಬೇರೆ ಮಾಡಿ ಬಿಟ್ಟಿದ್ದೆ ನೀನು....
ನೆನಪಿದೆಯಾ ನಿನಗೆ?? ಮದುವೆ ಮುಂಚೆ ಎಷ್ಟೋ ಸರಿ ಕೇಳಿದ್ದೆ ನಾನು...
"ನಮಗೆ ಮದುವೆ ಆದ ಮೇಲೆ... ಮಕ್ಕಳು ಆಗ್ತಾರಲ್ಲಾ...ಆವಾಗ ನೀನು ನನ್ನ ಜಾಸ್ತಿ ಪ್ರೀತಿಸ್ತೀಯಾ?? ಇಲ್ಲ ಮಕ್ಕಳನ್ನ??? " ಅಂತ ಕೇಳಿದ ಪ್ರತಿ ಬಾರಿ...ನೀನು
"ನಿನ್ನನ್ನ...ಕಣೆ.ನಿನಗೆ ಇನ್ನೂ ಡೌಟ್ ಇದ್ದರೆ ನಮಗೆ ಮಕ್ಕಳೇ ಬೇಡ..ನೀನೇ ನನ್ನ ಪಾಪು" ಅಂತಿದ್ದೆ.
ಈ ಮಾತು ಕೇಳಿದಾಗ ಪ್ರತಿ ಸರಿ ನಾನು ಅಳುತ್ತಿದ್ದೆ.
ಇವಾಗ ಅನಿಸುತ್ತಿದೆ.. ನೀನು ಮಕ್ಕಳನ್ನು ಪ್ರೀತಿಸಿದರೂ ನಡೆಯುತ್ತಿತ್ತು...
ನನ್ನ ಹುಚ್ಚು ಪ್ರಶ್ನೆಯಲ್ಲಿ ಆ "ದೇಶ" ಅನ್ನೋ ಪದ ಏನಕ್ಕೆ ಇರಲಿಲ್ಲ? ಅಂತ.

ಇಂತಿ ನಿನ್ನ,




#3
bhavi
ಪ್ರೀತಿಯ ಗಂಡ,
ನೀನು ಇರದ ಮೂರನೆಯ ಕರ್ವಾ ಚೌತ್ ಇದು(2013). ನಿನ್ನ ನೋಡಿ ಎರಡು ವರ್ಷದ ಮೇಲಾಯಿತು. ಎಲ್ಲೋ ಮರೆಯಲ್ಲಿ ನಿಂತು ಮರೆವಿಗಾಗಿ ಎದುರು ನೋಡುತ್ತಿರುವೆಯಾ?
ನಮ್ಮ ಮಗುವಿನ ಅಳು ಒಮ್ಮೆಯೂ ಕೇಳಿಸಿಲ್ವಾ ನಿನಗೆ? ನಾನು ನೆನಾಪಾಗೆ ಇಲ್ವಾ?
ನೀನು ಸತ್ತಿಲ್ಲ ಕಣೋ. ಇಂದು ಅಲ್ಲ ನಾಳೆ ಬಂದೇ ಬರುತಿಯಾ ಅಂತ ಗೊತ್ತು ನನಗೆ.
ಪ್ರತಿ ದಾರಿಯೂ ನಿನ್ನಲ್ಲಿಗೆ ಹೋಗುವುದು ಎಂಬ ನಂಬಿಕೆಯಲ್ಲಿ ಅಲೆಮಾರಿ ಆಗೋಗಿದೀನಿ ಕಣೋ ನಾನು. ಚಂದ್ರನ ನೋಡಿದರೆ ಭಯ ಆಗತ್ತೆ. ಮಳೆ ಯಾಕಾದರೂ ಬರುತ್ತೆ ? ಅನಿಸುತ್ತೆ. ಒಬ್ಬಂಟಿ ಆಗಿದ್ದ ನನ್ನ, ಮಗುನಾ ಕೊನೆಗೂ ಮನೆಯವರು ಬಿಡದೆ ಕರೆದುಕೊಂಡು ಬಂದರು. ಮಗು ಇನ್ನೂ ವರೆಗೂ "ಅಮ್ಮ" ಅಂದಿಲ್ಲ ಗೊತ್ತಾ???
ಪ್ರತಿ ಸಾರಿ ಅಪ್ಪ ಅಂತಾನೆ ಕೂಗತ್ತೆ. ನನ್ನ ಕೂಡ....
ಅದಕ್ಕೆ ಇವಾಗ ಒಂದು ವರೆ ವರ್ಷ.
ಎಲ್ಲಿ ಹುಡುಕಲಿ ನಿನ್ನ? ಎಲ್ಲರೂ ಮಾತಾಡಿಕೊಳ್ಳೋದು ನಿಜ ಅಲ್ಲ ಅಲ್ವಾ? ಕೊಟ್ಟ ಮಾತು ಮರೆಯಲ್ಲ ನೀನು. ನಮ್ಮ ಮೊಮ್ಮಕ್ಕಳ ಜೊತೆ ನಾವು ಆಟ ಆಡಬೇಕಾಗಿದ್ದು ಮರೆವೆಯಾ? ನಮ್ಮ ಪ್ರೀತಿಯ ಕಥೆ ಅವರಿಗೆ ಹೇಳದೆ ಹೊರಡುವೆಯಾ? ನನ್ನ ಕೊನೆಯ ಉಸಿರಾಟದಲ್ಲಿ ನೀನಿರಬೇಕು,ಅದು ನಿನ್ನ ತೋಳಲ್ಲಿ ನಿಲ್ಲಬೇಕು ಅನ್ನೋ ನನ್ನ ಆಸೆಯಾದ್ರೂ ನೆನಪಿದೆ ಅಲ್ವಾ?
ಎಲ್ಲೋ ಇದೀಯಾ ಕಣೋ ನೀನು. ಪಾಪದವನು ಮನೆ ವಿಳಾಸ ಮರೆತಿರ್ತೀಯಾ..
ಅಳು ಬರತ್ತೆ ಕಣೋ. ಮಗೂಗೆ ನೀನೇ ಹೆಸರಿಡಬೇಕು ಅಂತ ಇನ್ನಾ ಹೆಸರಿಟ್ತಿಲ್ಲ ಗೊತ್ತಾ?
ಎಲ್ಲ ಸ್ವಾರ್ಥಿಗಳು. ನೀನು ಬದುಕಿದ್ದರೂ ಮನೆಯವರು ಮಾರಣಾಂತಿಕ ಎಲ್ಲ ಮಾಡಿ ದೊಡ್ಡದಾಗಿ ಪೇಪರ್ ನಲ್ಲಿ ಫೋಟೋ ಎಲ್ಲ ಹಾಕಿಸಿದಾರೆ. ಯಾರೋ ಹೇಳಿದ್ದು ಅವರಿಗೆ ನೀನು ಬದುಕಿಲ್ಲ ಅಂತ.??
ಪ್ರತಿ ಮುಂಜಾನೆ ಮನೆಯಲ್ಲಿ ಒಂದೇ ಸುಪ್ರಭಾತ. ನಿನಗೋಸ್ಕರ ಅಲ್ಲದಿದ್ದರೂ ಮಗುವಿಗಾಗಿ ಆದರೂ ಒಂದು ಮದುವೆ ಮಾಡಿಕೊ ಅಂತ. ಮನೆಯಲ್ಲಿ ಇರೋಕು ಆಗ್ತಿಲ್ಲ ಕಣೋ. ಇಲ್ನೋಡು...ಈ ನಿನ್ನ ಹಿಟ್ಟು ಗಾಳಿಸೋದು ಕೂಡ ತುಕ್ಕು ಹಿಡಿಯುತ್ತಿದೆ ನಿನ್ನ ನೆನಪಲ್ಲಿ..
ಏನೋ ಇದು ಬದುಕು ಹೀಗಾಗಿದೆ? ಎಲ್ಲೋ ತೀರಾ ಎಲ್ಲೋ ದೋಣಿ.
ಪ್ರತಿ ಹೆಜ್ಜೆಯ ಸದ್ದಲು ನಿನದೇ ನೆರಳು.
ಪ್ರತಿ ಹಕ್ಕಿಯ ಕೂಗಲೂ ನಿನದೇ ಹೆಸರು.
ಪ್ರತಿ ಬೆಳಕಲ್ಲೂ ನಿನದೇ ಶಾಖ.
ಕಾದ ದಾರಿಯಲ್ಲೆಲ್ಲ ಹೆಜ್ಜೆಗಳು ಸವೆದಿವೆ.


ಬಾರೋ ಬೇಗ...ಕೊಟ್ಟ ಮಾತು ಉಳಿಸಿಕೊಳ್ತೀಯಾ ಅಲಾ?


ಎಂದಿಗೂ ನಿನ್ನವಳು,



##################
ಇದೆಲ್ಲ ಓದಿದ ಮೇಲೆ...ನಮ್ಮ ಲೇಖಕಿ ಗೆ ನಾಲ್ಕನೆಯ ಪತ್ರದಲ್ಲಿ ಏನಿತ್ತು ಅಂತ ಕೇಳಿದ ಪ್ರಶ್ನೆಗೆ ಉತ್ತರವಿರಲಿಲ್ಲ. :P
ಹೌದು... ಏನಿರಬಹುದು?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ