ಸೋಮವಾರ, ನವೆಂಬರ್ 25, 2013

ಮಲೆನಾಡು, ಮಳೆ ಮತ್ತು ಅವಳು.....

Image
ಮಲೆನಾಡು ಅನ್ನೋ ಪದ ನಮ್ಮ ಉಸಿರಾಟ ಇದ್ದ ಹಾಗೆ...ಅಪದಮನಿ, ಅಭಿದಮನಿ ಗಳು ಸಂವಹನ
ನಡೆಸುವವರೆಗೂ ಆ ಪದ ನಮ್ಮ ಹಿಮೋಗ್ಲೋಬಿನ್ ಜೊತೆ ಓಡಾಡುತ್ತಲೇ ಇರುತ್ತದೆ.
ಚಂದ್ರ, ತಾರೆ, ಬೆಳದಿಂಗಳು ಹೀಗೆ ಏನೇನೋ ಕವಿಗಳು ಜನ್ಮ ನೀಡಿದ ಶ್ರಂಗಾರ ಸಾಲುಗಳ ಬದುಕಾಗಿರುವ
ಪದಗಳ ಸಾಲಿನಲ್ಲಿ ನಾವು ಜೋಡಿಸುವ ಹೊಸ ಪದಗಳಲ್ಲಿ "ಮಲೆನಾಡು" ಕೂಡ ಒಂದು....
ಯಾವುದೇ ಹುಡುಗಿಯನ್ನು ಕಲ್ಪಿಸಿಕೊಂಡು, ಅವಳ ಸೌಂದರ್ಯ ಹೊಗಳಲು ಬರೆಯುವ ಕವನದ ಶಬ್ದಗಳ
ಹುಡುಕಾಟದಲ್ಲಿರುವಾಗ ನಮ್ಮ ಮನಸ್ಸು ಮೊದಲು ನೆನೆಯುವುದೇ ಅದು..."ಮಲೆನಾಡು".
ಮಲೆನಾಡಿಗೂ ಪ್ರೀತಿಗೂ ಏನೋ ಬಿಡಿಸಲಾರದ ನಂಟು....
"ಆಗುಂಬೆಯ ಪ್ರೇಮ ಸಂಜೆಯ....." ಅಂತ ಅಣ್ಣಾವ್ರ ಹಾಡಿನ ರಾಗಕ್ಕೆ...ಮನಸು ಹೆಜ್ಜೆ ಹಾಕಿದ ಅನುಭವ ಆಗದಿರದು.
ಪ್ರೀತಿಯ ಬಣ್ಣ ಕೇಳಿದ ಹುಡುಗಿಗೆ, ಮಲೆನಾಡಿನ ಹಸಿರನು ತೋರಿಸಿ......ಅದು ನಮ್ಮ
ಮೋಡ, ಮಳೆಯ ಸುರಿಸುತ್ತೆ ಎಂಬ ನಂಬಿಕೆಯಲ್ಲಿ, ಅವಳು ತಂದಿದ್ದ ಛತ್ರಿ ಬಿಡಿಸಿ,
ಮಳೆಯನ್ನು ಕಾಯುತ್ತಿರುವಾಗ ಅಲ್ಲಿದ್ದಿದ್ದು ಬರೀ ನಿರೀಕ್ಷೆ...
ನನಗೆ ಮಳೆಯದು...ಅವಳಿಗೆ ನನ್ನ ಮಾತು.
ಮೌನ....ಮಳೆ ಬರುವವರೆಗೂ...
ನನ್ನ ಪ್ರೀತಿಯ ಮಾತುಗಳನ್ನ ಕೇಳಲು ಆ ಮಳೆಯು ಕರಗಿತ್ತು...ನನ್ನವಳ ನಿದ್ದೆ ಇನ್ನೂ ಮುಗಿದಿರಲಿಲ್ಲ...
ಕೊಡೆ ಹಿಡಿದ ಅವಳ ಕೈಗಳಲ್ಲಿ ಆಗಾಗ ಒರೆಸಿಕೊಳ್ಳುತ್ತಿದ ಕಣ್ಣುಗಳು ರೆಪ್ಪೆಯ ಮಿಡಿತಗಳಿಗೆ ಮನಸೋತಿದ್ದವು...
ಇಬ್ಬನಿಯ ಮಳೆ ಕೊನೆಗೂ ಬಂತು...
ಅದು ಮಂಜಿನ ಶಾಖ....ಅವಳನ್ನ ನೋಡಿದೆ...ನಿನ್ನ ಮಳೆ ಇದೇನಾ???? ಅನ್ನೋ ಪ್ರಶ್ನೆ ಅವಳ ನೋಟದ
ನೂಲಲ್ಲಿ ಹೆಣೆದಿಟ್ಟು, ಕಣ್ಣು ಮುಚ್ಚಿ ಮಂಜಿಗೆ ಮುಖವಿಟ್ಟು ಮಲೆನಾಡಿನ ಸೊಬಗನ್ನು
feel ಮಾಡ್ಕೋತಿರೋ ಅವಳನ್ನ ನೋಡಿದ ನನಗೆ...ನಮ್ಮ ಭಟ್ಟರ ಯಾವುದೋ ಹಾಡು ಗಂಟಲಿನ
ಧ್ವನಿಪೆಟ್ಟಿಗೆಯಲ್ಲಿ ಹುಟ್ಟಿ ಅಲ್ಲೇ ಮರೆಯಾಗಿತ್ತು....
ಸ್ವಲ್ಪ ಜನ ಹುಡುಗೀರು ಮಲಗಿರುವಾಗ ಕ್ಯೂಟ್ ಆಗಿ ಕಾಣಿಸುತ್ತಾರಂತೆ...ಇನ್ನೂ ಕೆಲವರು
ಬೆಳಿಗ್ಗೆ ಎದ್ದಾಗ....ಅದೂ ಮುಖಕ್ಕೆ ನೀರು ತೋರಿಸದೆ...make-up ಇಲ್ಲದೆ....
 
ಮಳೆ ಲೈಟ್ ಆಗಿ break ತಗೊಂತು....
ನಾನು ಅವಳು ಕಣ್ಣು ಬಿಡುವುದನ್ನು ಕಾಯುತ್ತಿದ್ದೆ.
ಮನಸು ಹೇಳುತ್ತಿತ್ತು "ಏ ಹುಡುಗಿ, ನೀನು ಕಣ್ಣು ಮುಚ್ಚಿಕೊಂಡಿದ್ದರೇನೇ ಚೆನ್ನ ಕಣೆ...!!!" ಅಂತ.
ಆದರೂ ಮನದ ಗೂಡಲ್ಲಿ ಬಚ್ಚಿಟ್ಟ ಮಾತನು ಬಿಚ್ಚಿ ಹೇಳುವುದರ ಮುನ್ನ ಆ ಮನಸಿಗೆಲ್ಲಿದೆ ಸಮಾಧಾನ ಹೇಳಿ.
ಕೊನೆಗೂ ಹುಡುಗಿ ತಿರುಗಿದಳು. ಅವಳಿಗೆ ಆಗಲೇ ಪ್ರೀತಿಯಾಗಿತ್ತು ಮಲೆನಾಡಿನ ಮೇಲೆ.
ಮಲೆನಾಡು ಮೌನಿ..ನಾನು ಮಾತು...ಇಬ್ಬರು ಒಟ್ಟಿಗೆ ಇಷ್ಟವಾಗುವ  ಕ್ಷಣದ ಹುಡುಕಾಟದಲ್ಲಿ ಮಾತು ನಾಲಿಗೆಯನ್ನು ಜಾರಿತ್ತು.
 
ಅವಳು ಏನೋ ನೀರಿಕ್ಷೆಯನ್ನು ಕಂಗಳಲಿ ತುಂಬಿಕೊಂಡು ಒಮ್ಮೆ ಮೋಡಗಳನ್ನು ನೋಡಿ, ಮತ್ತೆ ನನ್ನ ನೋಟದ frequency ಗೆ ಟ್ಯೂನ್ ಮಾಡಿದಳು.
ಅವಳು ಮಳೆಯನ್ನ ಮಿಸ್ ಮಾಡ್ಕೋತಿದ್ದಳು. ಅವಳ ಕಣ್ಣನ್ನ ನನ್ನ ಕೈಯಿಂದ ಮುಚ್ಚಿ...
"ಮತ್ತೆ ಮಳೆ ಬರೋವರೆಗೂ, ಕಣ್ಣು ತೆರೆಯದಿರು, ಮೌನಿಯಾಗಿರು" ಅಂದೆ.
ನೀನು ಹೇಳಿದರೆ ನಾನು ಯಾವತ್ತಾದರೂ ಇಲ್ಲ ಅಂತ ಅಂದಿದೀನಾ??? ಅಂತ ಅವಳು ಕಣ್ಣು ಮುಚ್ಚಿ ಮುಖ ಆಡಿಸಿದ ಮುಗ್ದತೆ ಹೇಳಿತ್ತು.
" ಏ ಹುಡುಗಿ, ನೀನು ಅಂದ್ರೆ ನನಗೆ ಇಷ್ಟ ಕಣೆ....ನೀನು ಕೊನೆ ಉಸಿರಿರೋವರೆಗೂ ನನ್ನ ಜೊತೆ ಇರುತ್ತೀಯಾ ಅಲ್ವಾ??
ಕಣ್ಣೀರು ಮಳೆನೀರು ಮಿಕ್ಸ್ ಆದ್ರೆ ಏನಾಯ್ತು ಅಂತ ಯಾರಿಗೂ ಗೊತ್ತಾಗಲ್ಲ..ನೀನು ಇಲ್ಲ ಅಂದ್ರೆ.
ನಿನ್ನ ಉತ್ತರ ಹೌದು ಅನ್ನೋದಾಗಿದ್ರೆ ಮುಂದಿನ ವಾರ ಇರೋ ಹೋಳಿ ಹಬ್ಬಾನಾ ಇವತ್ತೇ ಈ ಮಲೆನಾಡಿನ ಮಳೆ ನೀರಲ್ಲಿ ಆಡಿ ಬಿಡೋಣ...
ನಾನು ಆ ಕಡೆ ತಿರುಗಿ ನನ್ನ ಕಣ್ಣು ಮುಚ್ಚಿ ನಿಂತಿರ್ತೀನಿ. ಮಳೆ ಬಂದ ಮೇಲೆ, ಹೋಳಿ ನಾ ಇಲ್ಲಾ ಬರೀ ಮಳೆನಾ??? ಅಂತ ಕಿವಿಲಿ ಹೇಳಿಬಿಡು..." ಅಂತ ಹೇಳಿ ಕಣ್ಣು ಮುಚ್ಚಿದೆ....
ಮಳೆಹನಿ ಮುಖಕ್ಕೆ ಮುತ್ತುಕೊಟ್ಟಿತ್ತು... ಅವಳು ನನ್ನೆಡೆಗೆ ಬರುತ್ತಿರುವುದನ್ನು ಅವಳ ಗೆಜ್ಜೆಗಳು ಹೇಳುತ್ತಿದ್ದವು.
ಉಸಿರಾಟದ ವೇಗ ಹೆಚ್ಚಾಗಿತ್ತು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ